ಬೆಂಗಳೂರು: ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಪರಿಹಾರ ಕಂಡುಕೊಳ್ಳುವುದಕ್ಕೆ ನಡೆಸುವ ಸಂಘರ್ಷದಿಂದ ನಾಯಕತ್ವ ಬೆಳೆಯುತ್ತದೆ ಎಂದು ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸಲಹೆ ನೀಡಿದರು.
ಖಾಸಗಿ ಹೋಟೆಲ್ ವೊಂದರಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಅಜಗಜಾಂತರವಿದೆ. ಇಟಲಿಯನ್ನು ಪ್ರತಿನಿಧಿಸುವ ಕಾಂಗ್ರೆಸ್ಗೆ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ನಡೆಯಿತು, ಗುಂಪುಗಾರಿಕೆ, ಯುವ ಅಧ್ಯಕ್ಷ ಸ್ಥಾನವನ್ನು ಫಿಫ್ಟಿ ಮಾದರಿಯಲ್ಲಿ ಹಂಚಿದರು ಎಂದು ತೇಜಸ್ವಿ ಸೂರ್ಯ ಟೀಕಿಸಿದರು.
ಬಿಜೆಪಿಯಲ್ಲಿ ಯುವ ನಾಯಕತ್ವ ಬೆಳೆಸುವ ಪರಂಪರೆಯಿದೆ. ಭಾರತೀಯತ್ವ, ಉತ್ತಮ ಸಂಸ್ಕೃತಿ ಹಾಗೂ ಸ್ವಯಂ ಶಿಸ್ತು ತಳಹದಿಯಾಗಿದ್ದು, ಎಲ್ಲರನ್ನು ಒಳಗೊಂಡು ಸಂಂಘಟನೆ ವಿಸ್ತರಣೆಗೆ ಒತ್ತು ನೀಡಿದರು.
ಸಭೆ ಉದ್ಘಾಟಿಸಿದ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಮುಂಬರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಸಂಘಟನೆ ಬಲಪಡಿಸಬೇಕು. ರಾಜಕಾರಣಿಗಳಿಗೆ ಚುನಾವಣೆಯೇ ಪರೀಕ್ಷೆಯಾಗಿದೆ ಎಂದರು.
ಬಿಜೆಪಿ ಕೇಂದ್ರ ನಾಯಕತ್ವ ಬಲಿಷ್ಠವಾಗಿದ್ದು, ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತದೆ. ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರಿಂದ ಯಾವುದೇ ಸಂದೇಶ ಬಂದಿಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿ ವೇಳೆ ಆ ವಿಷಯವು ಚರ್ಚೆಯಾಗಿಲ್ಲ ಎಂದರು. ಸರ್ಕಾರ ಎರಡು ವರ್ಷ ಪೂರ್ಣಗೊಳಿಸಲಿರುವ ಜು.26ರಂದು ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದು, ಆ ಸಂದರ್ಭದಲ್ಲಿ ಪ್ರತಿಯೊಬ್ಬ ಶಾಸಕರ ಜತೆಗೆ ಸಿಎಂ ಮುಖಾಮುಖಿ ಚರ್ಚೆ ನಡೆಸಲಿದ್ದು, ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲವೆಂದು ಸ್ಪಷ್ಟಪಡಿಸಿದರು.
ದೆಹಲಿಗೆ ಹೋಗಲ್ಲ: ವಲಸಿಗ ಸಚಿವರು ದೆಹಲಿಗೆ ಹೋಗಲ್ಲ, ವರಿಷ್ಠರ ಭೇಟಿಗೆ ಕಾಲಾವಕಾಶ ಪಡೆದಿಲ್ಲ. ಇದನ್ನು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳು ಸಿಎಂ ಬಿಎಸ್ ವೈ ದೆಹಲಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಇಲಾಖೆ ಕೆಲಸದ ನಿಮಿತ್ತ ಇಷ್ಟರಲ್ಲೇ ನಾನೂ ದೆಹಲಿಗೆ ಹೋಗಬೇಕೆಂದಿರುವೆ ಎಂದು ಆರ್.ಅಶೋಕ್ ತಿಳಿಸಿದರು. ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.