ಜಿಲ್ಲೆ

ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಕಾರು ಅಪಘಾತ

suchetana

ಹಾಸನ: ಚನ್ನರಾಯಪಟ್ಟಣದ ಹಿರೇಸಾವೆ ಸಮೀಪ ಮೇಟಿಕೆರೆ ಗೇಟ್‌ ಬಳಿ ವಿಶ್ವಕರ್ಮ ಸಮಾಜ ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಕಾರು ಅಪಘಾತವಾಗಿದೆ. ಕಾರಿನಲ್ಲಿದ್ದ ಸ್ವಾಮೀಜಿಯವರು ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ಸಂಭವಿಸಿದೆ. ಸ್ವಾಮೀಜಿ ಶಿಷ್ಯರೊಂದಿಗೆ ಮಠದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮೇಟಿಕೆರೆ ಗೇಟ್‌ ಬಳಿ ರಸ್ತೆ ದಾಟುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಬೈಕ್‌ ಸವಾರ ಎಚ್‌.ಎನ್‌. ಯೋಗೇಶ್‌ ಗಾಯಗೊಂಡಿದ್ದಾರೆ. ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿಯ ನಿವಾಸಿ ಯೋಗೇಶ್​ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಬೆಂಗಳೂರಿನ ಪ್ರವಾಸವನ್ನು ಮೊಟಕುಗೊಳಿಸಿದ ಸ್ವಾಮೀಜಿ, ಮಠಕ್ಕೆ ವಾಪಸಾಗಿದ್ದಾರೆ. ಅಪಘಾತ ವಿಷಯ ತಿಳಿದ ವಿಶ್ವಕರ್ಮ ಸಂಘದ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ಗಣೇಶ್‌ ಮತ್ತು ಮುಖಂಡರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಅವರನ್ನು ಬೇರೆ ಕಾರಿನಲ್ಲಿ ಅರೇಮಾದನಹಳ್ಳಿ ಮಠಕ್ಕೆ ಕಳುಹಿಸಿಕೊಟ್ಟರು.