ಬೆಂಗಳೂರು: ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸರ್ಕಾರದ ವತಿಯಿಂದ ನೀಡುವ ಪ್ರಶಸ್ತಿಗೆ ಆರು ಜನ ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ (ಸೆ.30) ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಮಡಿಕೇರಿಯ ಎಂ.ಎಂ. ಬೋಪಯ್ಯ (ಶಿಕ್ಷಣ), ಧಾರವಾಡದ ಡಾ. ಬಿ.ಕೆ. ಬಸವರಾಜ ರಾಜಋಷಿ (ಸಾಹಿತ್ಯ), ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೀಕರ್ (ಕಲೆ), ಕೊಪ್ಪಳದ ಡಾ. ಕೆ.ಜಿ. ಕುಲಕರ್ಣಿ (ಸಮಾಜಸೇವೆ), ಮೈಸೂರಿನ ವಿಜಯ ರಮೇಶ್ (ಕ್ರೀಡೆ), ಬೆಂಗಳೂರಿನ ಡಾ. ಕೋಡೂರು ವೆಂಕಟೇಶ್ (ಕಾನೂನು) ಮತ್ತು ಶಿವಮೊಗ್ಗದ ಸಾವಿತ್ರಮ್ಮ ರಾಮಶರ್ಮ ಸೇವಾ ಟ್ರಸ್ಟ್ನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಒಂದು ಲಕ್ಷ ರೂ. ನಗದನ್ನು ಒಳಗೊಂಡಿದೆ. ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ಅರ್ಹರನ್ನು ಆಯ್ಕೆ ಮಾಡಿದೆ ಎಂದು ಸಚಿವ ಹಾಲಪ್ಪ ಆಚಾರ್ ವಿವರಿಸಿದರು.
ಅನುದಾನ ಹೆಚ್ಚಳ
ರಾಜ್ಯದ 35 ವೃದ್ಧಾಶ್ರಮಗಳಿಗೆ ಸರ್ಕಾರದ ವತಿಯಿಂದ ನೀಡುತ್ತಿದ್ದ ವಾರ್ಷಿಕ 8 ಲಕ್ಷ ರೂ.ಗಳ ಅನುದಾನವನ್ನು 12 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 65 ವರ್ಷ ಮೀರಿದ 41.61 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನವನ್ನು 1200 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.