ಜಿಲ್ಲೆ

ಅಪ್ಪು ಮರೆಯಾಗಿ ತಿಂಗಳಾಯ್ತು... ದೊಡ್ಮನೆ, ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆ: ಶೀಘ್ರವೇ ಎರಡು ಚಿತ್ರ ಬಿಡುಗಡೆ

suchetana

ಬೆಂಗಳೂರು: ಕಳೆದ ಅಕ್ಟೋಬರ್‌ 29. ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿಯೂ ಬರಸಿಡಿಲಿನಂತೆ ಬಂದೆರಗಿದ ಸುದ್ದಿಯೆಂದರೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇನ್ನಿಲ್ಲ ಎಂಬ ಸುದ್ದಿ. ಕರ್ನಾಟಕ, ತಮಿಳುನಾಡು ಸೇರಿದಂತೆ ಇನ್ನೂ ಹಲ ರಾಜ್ಯಗಳ ಅಪ್ಪು ಅಭಿಮಾನಿಗಳನ್ನು ಕಣ್ಣೀರಿನಲ್ಲಿ ತೇಲಿಸಿದ ದಿನವು.

ಇಂದಿಗೆ ಅಪ್ಪು ಎಲ್ಲರನ್ನೂ ಅಗಲಿ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಡಾ.ರಾಜ್‌ ಕುಟುಂಬಸ್ಥರು ವಿಶೇಷ ಪೂಜೆಯನ್ನು ಏರ್ಪಡಿಸಿದ್ದಾರೆ. ಸದಾಶಿವನಗರದಲ್ಲಿ ಇರುವ ಪುನೀತ್‌ ಅವರ ಮನೆಯಲ್ಲಿ ಹಾಗೂ ಅವರ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ.

ಪುನೀತ್‌ ಅವರು ಅಗಲಿ ತಿಂಗಳಾದರೂ ಇಂದಿಗೂ ಅವರ ಸಮಾಧಿಗೆ ಅಭಿಮಾನಿಗಳು ಬರುತ್ತಲೇ ಇದ್ದು, ಇಂದು ಕೂಡ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ಸ್ಟುಡಿಯೋದ ದ್ವಾರಗಳು ತೆರೆಯಲಿರುವುದಾಗಿ ತಿಳಿದುಬಂದಿದೆ.

ಅದೇ ಇನ್ನೊಂದೆಡೆ ಪುನೀತ್‌ ಅವರು ಸಾಯುವ ಮುನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದ ಜೇಮ್ಸ್‌ ಮತ್ತು ಲಕ್ಕಿಮ್ಯಾನ್‌ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗುವುದಾಗಿ ಹೇಳಲಾಗಿದೆ. ಜೇಮ್ಸ್‌ ಚಿತ್ರ ತೆರೆ ಕಾಣುವ ಕುರಿತು ಇದಾಗಲೇ ಘೋಷಣೆ ಕೂಡ ಮಾಡಲಾಗಿದೆ. ಇದರ ಜತೆಗೆನೇ ಪ್ರಭುದೇವ ಮತ್ತು ಡಾರ್ಲಿಂಗ್​ ಕೃಷ್ಣ ನಟಿಸಿರುವ ‘ಲಕ್ಕಿ ಮ್ಯಾನ್​’ ಶೂಟಿಂಗ್​ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅದು ಕೂಡ ಶೀಘ್ರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

ಅಂತೆಯೇ, ಪುನೀತ್​ ಅವರು ನೋಡಿಕೊಳ್ಳುತ್ತಿದ್ದ ‘ಪಿಆರ್​ಕೆ ಪ್ರೊಡಕ್ಷನ್ಸ್​’, ‘ಪಿಆರ್​ಕೆ ಆಡಿಯೋ’, ‘ಶಕ್ತಿಧಾಮ’ ಮುಂತಾದ ಸಂಸ್ಥೆಗಳ ಜವಾಬ್ದಾರಿಯನ್ನು ಅವರ ಕುಟುಂಬ ನಿಭಾಯಿಸುತ್ತಿದೆ.