ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಅವರು ಬದುಕಿದ್ದಾಗ ಮಾಡಿದ ಸಾಮಾಜಿಕ ಸೇವೆಗಳ ಬಗ್ಗೆ ಹಲವಾರು ಮಂದಿ ಮಾಹಿತಿ ಹಂಚಿಕೊಳ್ಳುತ್ತಲೇ ಇದ್ದಾರೆ.
ಇದೀಗ ಪುನೀತ್ ಮ್ಯಾನೇಜರ್ ಆಗಿದ್ದ ವಜ್ರೇಶ್ವರಿ ಕುಮಾರ್ ಕೆಲವೊಂದು ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದು, ಇದು ಅಪ್ಪು ಅವರ ಸಾಮಾಜಿಕ ಸೇವೆಯ ಕುರಿತು ಇನ್ನಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಪುನೀತ್ ಅವರು ನಡೆಸಿಕೊಡುವುದು ಎಲ್ಲರಿಗೂ ತಿಳಿದದ್ದೇ. ಆದರೆ ಯಾರಿಗೂ ತಿಳಿಯದ ವಿಷಯವೊಂದನ್ನು ವಜ್ರೇಶ್ವರಿಯವರು ಹಂಚಿಕೊಂಡಿದ್ದಾರೆ. ಅದೇನೆಂದರೆ, ಈ ಆಟದಲ್ಲಿ ಭಾಗವಹಿಸಲು ಕೆಲವು ಅದೃಷ್ಟಶಾಲಿಗಳಿಗೆ ಅವಕಾಶ ಸಿಕ್ಕರೂ, ಹಾಟ್‌ಸೀಟ್ ಮೇಲೆ ಕುಳಿತುಕೊಳ್ಳುವ ಅವಕಾಶದಿಂದ ವಂಚಿತರಾಗುವವರು ಹಲವರು, ಹಾಟ್‌ಸೀಟ್ ಮೇಲೆ ಕುಳಿತುಕೊಂಡರೂ, ಕೆಲವೊಮ್ಮೆ ಪ್ರಶ್ನೆಗೆ ಸರಿಯುತ್ತರ ಹೇಳಲು ವಿಫಲರಾದ ಬರಿಗೈಯಲ್ಲಿ ವಾಪಸಾಗುವವರು ಇನ್ನು ಕೆಲವರು.
ಆದರೆ ಈ ಪೈಕಿ ಹಣದ ಅತಿ ಅಗತ್ಯ ಇರುವವರಿಗೆ, ಕಾರ್ಯಕ್ರಮದಲ್ಲಿ ಹಣ ಸಿಗದೇ ಹೋದರೆ ಪುನೀತ್ ಅವರೇ ಖುದ್ದು ಚೆಕ್ ಬರೆದು ಹಣ ನೀಡುತ್ತಿದ್ದರು ಎನ್ನುವ ಅಂಶವನ್ನು ವಜ್ರೇಶ್ವರಿ ಅವರು ಈಗ ಹೇಳಿದ್ದಾರೆ. ಎಷ್ಟೋ ಮಂದಿಗೆ ಅವರೇ ತಮ್ಮ ಕೈಯಿಂದ ಚೆಕ್ ಬರೆದು ಕೊಡುತ್ತಿದ್ದರು. ಅದು ಯಾರಿಗೂ ತಿಳಿಯಬಾರದು ಎಂದು ಹೇಳುತ್ತಿದ್ದರು ಎಂದು ವಜ್ರೇಶ್ವರಿಯವರು ವಿವರಿಸಿದ್ದಾರೆ.
ಅದೇ ರೀತಿ ಯಾವುದಾದರೂ ಸರ್ಕಾರಿ ಶಾಲೆಗಳಲ್ಲಿ ಶೂಟಿಂಗ್‌ಗೆ ಹೋದರೆ, ಆ ಸರ್ಕಾರಿ ಶಾಲೆಗಳು ದುಃಸ್ಥಿತಿಯಲ್ಲಿದ್ದರೆ ಆ ಶಾಲೆಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಅಗತ್ಯ ಸಾಮಗ್ರಿಗೆ ಹಣದ ನೆರವು ನೀಡುತ್ತಿದ್ದರಂತೆ ಪುನೀತ್. ಈ ವಿಷಯವನ್ನೂ ವಜ್ರೇಶ್ವರಿಯವರು ಹೇಳಿದ್ದಾರೆ. ಇನ್ನು ಯಾವಾಗಲೂ ಸಣ್ಣಸಣ್ಣ ಹೋಟೆಲ್‌ಗಳಿಗೆ ಹೋಗಿ ತಿಂಡಿ ತಿನ್ನುತ್ತಿದ್ದರು, ಯಾವತ್ತೂ ಯಾರೊಂದಿಗೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ, ಅಷ್ಟು ಒಳ್ಳೆಯ ಮನುಷ್ಯ ಅವರದ್ದಾಗಿದ್ದರು ಎಂದು ವಜ್ರೇಶ್ವರಿಯವರು ಭಾವುಕರಾಗಿದ್ದಾರೆ.