ಜಿಲ್ಲೆ

ಕೊಲೆ ಆರೋಪ ಹೊತ್ತ ಮಾಜಿ ಸಚಿವನಿಗೆ ಜೈಲೇ ಗತಿ- ಜಾಮೀನು ಅರ್ಜಿಯಾಯ್ತು ವಜಾ

suchetana

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಕಾಂಗ್ರೆಸ್​ನ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಳೆದ ನವೆಂಬರ್ 5 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿತ್ತು. ಇದಾದ ನಂತರ ಧಾರವಾಡ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಕೂಡ ಇವರಿಗೆ ಜಾಮೀನು ಸಿಕ್ಕಿರಲಿಲ್ಲ.

ಈ ಆದೇಶ ಪ್ರಶ್ನಿಸಿ ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಅನೇಕ ಬಾರಿ ಅರ್ಜಿಯ ವಿಚಾರಣೆ ಮುಂದೂಡುತ್ತ ಬಂದಿತ್ತು. ಇಂದು ವಿಚಾರಣೆ ಸಂಪೂರ್ಣಗೊಳಿಸಿರುವ ಕೋರ್ಟ್​, ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.

ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು. ಈ ಆರೋಪ ನಿರಾಧಾರವಾಗಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಅವರು ಕೋರಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ನಟರಾಜ ಅವರು ವಾದವನ್ನು ಮಾನ್ಯ ಮಾಡದೇ ಅರ್ಜಿ ವಜಾಗೊಳಿಸಿದರು.