ಜಿಲ್ಲೆ

ಮದ್ವೆಗೆ ಒಂದಿಬ್ರು ಹೆಚ್ಚಿಗೆ ಹೋದ್ರೆ ಗೊತ್ತಾಗಲ್ಲಾ ಅಂದ್ಕೊಂಡ್ರಾ? ಬ್ಯಾಂಡ್‌ ಇದ್ರಷ್ಟೇ ಎಂಟ್ರಿ.... ನೋಡಿ ಹೊಸ ಪ್ಲ್ಯಾನ್‌!

suchetana

ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ಮದುವೆ ಮನೆಗಳಿಗೆ ಕೆಲವೊಂದು ಷರತ್ತುಗಳನ್ನು ಇದಾಗಲೇ ವಿಧಿಸಲಾಗಿದೆ. 50 ಮಂದಿಗಿಂತ ಹೆಚ್ಚಿಗೆ ಜನರು ಮದುವೆಮನೆಗೆ ಹೋಗುವಂತಿಲ್ಲ, ಜತೆಗೆ ಆ 50 ಮಂದಿಗೂ ಹಲವಾರು ಷರತ್ತುಗಳನ್ನು ಈಗಾಗಲೇ ನೀಡಲಾಗಿದೆ.

ಆದರೆ ಇದರ ಜತೆಗೆ, ಧಾರವಾಡ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಲ್ಲಿ ಯಾವುದೇ ಕಲ್ಯಾಣಮಂಟಪಕ್ಕೆ ಮದುವೆಗೆ ಹೋಗಬೇಕು ಎಂದರೆ ಆ 50 ಮಂದಿ ಕಡ್ಡಾಯವಾಗಿ ಕೈಗೆ ಬ್ಯಾಂಡ್‌ ಧರಿಸಿರಬೇಕು.

ಧಾರವಾಡ ಜಿಲ್ಲಾಡಳಿತ ಮದುವೆಗೆ ಅನುಮತಿ ನೀಡುವಾಗ 50 ಬ್ಯಾಂಡ್‌ಗಳನ್ನು ಮದುವೆ ಆಯೋಜಕರಿಗೆ ನೀಡಲಾಗುತ್ತಿದೆ. ಮದುವೆಗಳಲ್ಲಿ ಭಾಗವಹಿಸುವ 50 ಜನರ ಕೈಗಳಿಗೆ ಇದನ್ನು ಕಟ್ಟಬೇಕು. ಈ ಬ್ಯಾಂಡ್ ಇದ್ದವರಿಗಷ್ಟೇ ಮದುವೆಗೆ ಅವಕಾಶ ಇರುತ್ತದೆ.

ಬ್ಯಾಂಡ್ ಮೇಲೆ ಕೊವಿಡ್ 19 ಪಾಸ್ ಎಂದು ಬರೆಯಲಾಗಿದೆ. ಅಲ್ಲದೆ ಧಾರವಾಡ ಜಿಲ್ಲೆ ಎಂದು ಬರೆದು, ಅದರ ಕೆಳಗೆ ಬ್ಯಾಂಡ್ ಸಂಖ್ಯೆ ಹಾಕಲಾಗಿದೆ. ಅವರವರ ಹೆಸರಿಗೆ ತಕ್ಕಂತೆ ರೆಜಿಸ್ಟರ್ ಸಂಖ್ಯೆ ಹಾಕಿ ಈ ಬ್ಯಾಂಡ್‍ಗಳನ್ನು ನೀಡಲಾಗುತ್ತಿದೆ.

ಬಿಡಿ, ಒಬ್ಬರು ಬಂದು ಹೋದಮೇಲೆ ಅದನ್ನು ಇನ್ನೊಬ್ಬರಿಗೆ ಕೊಟ್ಟರಾಯ್ತು ಅಂದುಕೊಂಡರೆ ಅದು ತಪ್ಪು. ಏಕೆಂದರೆ ಇದಕ್ಕೂ ಪ್ಲ್ಯಾನ್‌ ಮಾಡಿರುವ ಜಿಲ್ಲಾಡಳಿತ, ಒಂದು ಸಲ ಇದನ್ನು ಕೈಗೆ ಹಾಕಿಕೊಂಡರೆ ತೆಗೆದು ಮತ್ತೊಬ್ಬರಿಗೆ ಹಾಕಲು ಬರುವುದಿಲ್ಲ. ಹೀಗೆ ತೆಗೆಯಲು ಹೋದರೆ ಬ್ಯಾಂಡ್ ತುಂಡಾಗುತ್ತದೆ ಎಂಬ ಮಾಹಿತಿಯನ್ನು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೀಡಿದ್ದಾರೆ. ಇದರಿಂದ 50 ಜನರಿಗಿಂತ ಒಬ್ಬರೇ ಒಬ್ಬರು ಹೆಚ್ಚಾದರೂ ಅದು ತಿಳಿದುಬಿಡುತ್ತದೆ ಎಂದಿದ್ದಾರೆ ಅವರು.

ಸದ್ಯ ಇದಕ್ಕೆ ಹಲವಾರು ಜಿಲ್ಲಾಡಳಿತಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ಕಡೆಗಳಲ್ಲಿಯೂ ಬಂದರೆ ಅಚ್ಚರಿಯಿಲ್ಲ.

s