ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಐಟಿ ಕಂಪೆನಿಗಳು ಸೇರಿದಂತೆ ಕೆಲವು ಕಂಪೆನಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶವನ್ನು ಸಿಬ್ಬಂದಿಗೆ ನೀಡಿದೆ.
ಮಂಗಳವಾರದಿಂದ (ಏಪ್ರಿಲ್ 28) 14 ದಿನಗಳ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಮೇ 12ರವರೆಗೆ ಸರ್ಕಾರದ ಕೆಲವು ಇಲಾಖೆಗಳು ಸೇರಿದಂತೆ ಕೆಲವೊಂದು ಕಂಪೆನಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರು ಇರಬೇಕು ಎಂದು ಇದಾಗಲೇ ಸರ್ಕಾರ ಹೇಳಿದೆ.
ಇದೀಗ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿರುವ ಸರ್ಕಾರ, ರಾಜ್ಯದ ಅಗತ್ಯ ಸೇವೆ ಇಲಾಖೆಯ ಹೊರತಾಗಿ, ಕೆಲ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದರೆ, ಇನ್ನು ಕೆಲವು ಇಲಾಖೆಯ ಸಿಬ್ಬಂದಿಗೆ ಹಾಜರಾತಿಯಿಂದ ಸಂಪೂರ್ಣ ವಿನಾಯ್ತಿ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಯಾವ್ಯಾವ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ, ಯಾವ್ಯಾವ ಇಲಾಖೆಗಳಲ್ಲಿ ಸಂಪೂರ್ಣ ವಿನಾಯಿತಿ ಹಾಗೂ ಯಾವ ಇಲಾಖೆಗಳಲ್ಲಿ ಸಂಪೂರ್ಣ ಹಾಜರಾಗಿ ಇರಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಡ್ಡಾಯವಾಗಿ ಎಲ್ಲಾ ಸಿಬ್ಬಂದಿ ಬರಬೇಕಾದ ಇಲಾಖೆಗಳು:
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
* ವೈದ್ಯಕೀಯ ಶಿಕ್ಷಣ ಇಲಾಖೆ
* ಒಳಾಡಳಿತ ಇಲಾಖೆ ಮತ್ತು ಕಂದಾಯ ಇಲಾಖೆ.
ಶೇ.50ರಷ್ಟು ಹಾಜರಾಗಿ ಇರಬೇಕಾದ ಇಲಾಖೆಗಳು (ರೊಟೇಷನ್ ಆಧಾರದ ಮೇಲೆ ಕರ್ತವ್ಯ)
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ
* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ,
*ಇಂಧನ ಇಲಾಖೆ,
*ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
*ಆರ್ಥಿಕ ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,
*ಕೃಷಿ ಇಲಾಖೆ, ಕಾರ್ಮಿಕ ಇಲಾಖೆ,
*ತೋಟಗಾರಿಕೆ ಇಲಾಖೆ ಮತ್ತು ವಾಣಿಜ್ಯ,
*ಕೈಗಾರಿಕಾ ಇಲಾಖೆ
ಇವುಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳ ಅಧಿಕಾರಿಗಳು, ನೌಕರರಿಗೆ ಕಚೇರಿಗೆ ಬರುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೀಗೆ ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಇಲಾಖೆಯ ಕಾರ್ಯದರ್ಶಿಯವರು, ಇಲಾಖಾ ಮುಖ್ಯಸ್ಥರು ಇಚ್ಛಿಸಿದಲ್ಲಿ, ಅವರು ಬಯಸುವಂತಹ ಅಧಿಕಾರಿ, ನೌಕರರುಗಳು ಯಾವುದೇ ಕಾರಣ ನೀಡದೇ ಕಚೇರಿಗೆ ಹಾಜರಾಗುವುದು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಇವರ ಪೈಕಿ ಯಾರಿಗಾದರೂ ಕರೊನಾ ಡ್ಯೂಟಿಗೆ ಹಾಕಿದ್ದರೆ ಅವರು ಕಡ್ಡಾಯವಾಗಿ ಬರಬೇಕು. ಉಳಿದಂತೆ, ದೃಷ್ಟಿಹೀನ, ಅಂಗವೈಕಲ್ಯ ಹಾಗೂ ಗರ್ಭಿಣಿಯರು ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ.