ಧಾರವಾಡ: ಕರೊನಾ ಕಾರಣದಿಂದಾಗಿ ಇದಾಗಲೇ ಹಲವಾರು ಪರೀಕ್ಷೆಗಳು ರದ್ದಾಗಿದ್ದರೆ, ಇನ್ನು ಕೆಲವು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯದಿಂದ ಆದೇಶ ಹೊರಡಿಸಲಾಗಿದೆ. ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ.
ಕರೊನಾ ಇದ್ದರು ಕೂಡ ಪರೀಕ್ಷೆಗಳನ್ನು ಮುಂದೂಡದ ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು, ಕುಲಪತಿ ಕಚೇರಿ ಬಳಿ ದಿಢೀರನೇ ಪ್ರತಿಭಟನೆ ನಡೆಸಿದರು. ನಮಗೆ ಸದ್ಯಕ್ಕೆ ಪರೀಕ್ಷೆ ಬೇಡ ಎಂದು ಒಕ್ಕೋರಲಿನಿಂದ ಕೂಗಿದರು. ಕರೊನಾ ಕಡಿಮೆಯಾದ ಮೇಲೆ ಪರೀಕ್ಷೆ ಮಾಡಿ ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಅನಿರ್ದಿಷ್ಟಾವಧಿಗೆ ಪರೀಕ್ಷೆ ಮುಂದೂಡಿ ಆದೇಶ ಮಾಡಿದೆ. ಹಾಸ್ಟೆಲ್‍ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಸ್ಟೆಲ್ ಸ್ಯಾನಿಟೈಸ್ ಮಾಡಿದ ಬಳಿಕವೇ ಒಳಗೆ ಬರುತ್ತೇವೆ. ಪರೀಕ್ಷೆ ನಡೆಸುವ ಒಂದು ವಾರ ಮುಂಚಿತವಾಗಿ ನಮಗೆ ಸೂಚನೆ ನೀಡಬೇಕು. ಹಾಸ್ಟೆಲ್ ಕ್ಲೀನ್ ಮಾಡಿಸಿದರೆ ಹಿಂದಿರುಗುತ್ತೇವೆ. ಸದ್ಯಕ್ಕೆ ಪರೀಕ್ಷೆ ಮುಂದೂಡಿದ್ದಕ್ಕೆ ವಿದ್ಯಾರ್ಥಿಗಳು ಹೇಳಿದ್ದಾರೆ.
ಕರೊನಾ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದ ಮೇಲೆ ಷಾರ್ಟ್ ನೋಟಿಸ್ ನೀಡಿ ಪರೀಕ್ಷೆ ನಡೆಸುವುದಾಗಿ ಆಡಳಿತ ಮಂಡಳಿ ಹೇಳಿದೆ.