ಜಿಲ್ಲೆ

ಹಲೋ ಸರ್‌... ನಿಮ್ಗೊಂದು ಗುಡ್‌ನ್ಯೂಸ್‌... ತರುಣಿಯ ಕರೆ ಸ್ವೀಕರಿಸಿ 32 ಲಕ್ಷ ರೂ. ಕಳಕೊಂಡ ಹುಬ್ಬಳ್ಳಿ ಉದ್ಯಮಿ!

suchetana

ಹುಬ್ಬಳ್ಳಿ: ಸೈಬರ್‌ ವಂಚಕರ ಜಾಲ ಅದೆಷ್ಟು ಬೃಹದಾಕಾರವಾಗಿ ಬೆಳೆದಿದೆ ಎಂದರೆ ಯಾವ್ಯಾವ ರೂಪಗಳಲ್ಲಿ ಅವರು ಹೊಂಚುಹಾಕಿ ಹಣ ಲಪಟಾಯಿಸುತ್ತಾರೋ ತಿಳಿಯುವುದೇ ಇಲ್ಲ. ಇದರ ಬಗ್ಗೆ ದಿನನಿತ್ಯವೂ ಹಲವಾರು ಸುದ್ದಿಗಳು ಪ್ರಕಟವಾಗುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುವುದೇ ಇಲ್ಲ. ಅತ್ತ ಕಡೆಯಿಂದ ಬರುವ ಮಾತುಗಳಿಗೆ (ಅದರಲ್ಲಿಯೂ ಹೆಚ್ಚಾಗಿ ಇಂಥ ಕರೆಗಳು ಬರುವುದು ಯುವತಿಯರಿಂದಲೇ ಎನ್ನುವುದನ್ನು ಮರೆಯಬೇಡಿ) ಮರುಳಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಅಂಥದ್ದೇ ಇನ್ನೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಶಾಪಿಂಗ್‌ ವೆಬ್‌ಸೈಟ್‌ ‘ಫ್ಲಿಪ್‌ಕಾರ್ಟ್‌’ನ ಹೆಸರು ಹೇಳಿಕೊಂಡು ಹುಬ್ಬಳ್ಳಿಯ ಉದ್ಯಮಿಯೊಬ್ಬರಿಗೆ 32 ಲಕ್ಷ ರೂಪಾಯಿ ಟೋಪಿ ಹಾಕಿದ್ದಾರೆ ಸೈಬರ್‌ ವಂಚಕರು. ಇವರ ವಂಚನೆಗೆ ಮೋಸ ಹೋದವರು ಗುರುಮೂರ್ತಿ ಎನ್ನುವವರು.

ಇವರಿಗೆ ಕರೆ ಮಾಡಿದ್ದ ಯುವತಿಯೊಬ್ಬಳು, ‘ ಹಲೋ ಸರ್‌, ನಿಮಗೊಂದು ಗುಡ್‌ನ್ಯೂಸ್‌. ನಾನು ಪ್ಲಿಪ್‌ಕಾರ್ಟ್‌ ಕಂಪನಿಯಿಂದ ಕಾಲ್‌ ಮಾಡುತ್ತಿದ್ದೇನೆ. ಇದರ ಹೊಸ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು, ಈ ಆಫರ್‌ ನಿಮಗಾಗಿ ಮಾತ್ರ’ ಎಂದಿದ್ದಾಳೆ. ಮೊದಮೊದಲು ಗುರುಮೂರ್ತಿಯವರು ಇದನ್ನು ನಿರ್ಲಕ್ಷಿಸಿದರೂ ಅವರು ಸ್ವಲ್ಪ ಆಸಕ್ತಿ ತೋರಿದ್ದಾರೆ ಎಂದು ತಿಳಿದ ತಕ್ಷಣ ಯುವತಿ ಪದೇ ಪದೇ ಉದ್ಯಮಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ಬಣ್ಣಬಣ್ಣದ ಮಾತನ್ನಾಡಿದ್ದಾಳೆ.

ಆಕೆಯ ಮಾತನ್ನು ನಂಬಿದ ಗುರುಮೂರ್ತಿಯವರು, ಆಕೆ ಹೇಳಿದಂತೆ ಹಣ ಸಂದಾಯ ಮಾಡಲು ಶುರು ಮಾಡಿದ್ದಾರೆ. ಇಷ್ಟು ಹಣ ಹಾಕಿದರೆ ಇಂತಿಷ್ಟು ಲಾಭ ಎಂದುಕೊಂಡು ಅವರಿಂದು ಒಟ್ಟೂ 32 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಅದಾದ ಮೇಲೆ ಕರೆ ಕಟ್‌ ಆಗಿದ್ದು, ಫೋನ್ ಸ್ವಿಚ್‌ ಆಫ್‌ ಆಗಿದೆ. ಆಗಲೇ ಗುರುಮೂರ್ತಿಯವರಿಗೆ ತಾವು ಮೋಸ ಹೋಗಿರುವುದು ತಿಳಿದಿದೆ.

ಕರೊನಾದಿಂದಾಗಿ ತುಂಬಾ ನಷ್ಟದಲ್ಲಿದ್ದ ತಾವು, ಹೊಸ ಪ್ರಾಜೆಕ್ಟ್‌ ಬಗ್ಗೆ ಕೇಳಿ ಉತ್ಸುಕನಾದೆ. ಅದರಿಂದ ಆಕೆ ಹೇಳಿದ ಮಾತುಗಳನ್ನು ನಂಬಿ ಮೋಸ ಹೋದೆ ಎಂದು ಅವರೀಗ ಸೈಬರ್‌ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.