ಹಾವೇರಿ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ಅಮ್ಮ ಇರಲಾರಳು ಎಂಬುದು ಜನಪ್ರಿಯ ನಾಣ್ಣುಡಿ. ಇದಕ್ಕೆ ಅಪವಾದ ಎಂಬಂತೆ ಕೆಲವೊಮ್ಮೆ ಘಟನೆಗಳು ನಡೆಯುತ್ತಿದ್ದರೂ, ತ್ಯಾಗ, ಸಹನೆ, ಪ್ರೀತಿ, ಕರುಣೆ ಎಂದೆಲ್ಲಾ ಬಂದಾಗ ಮೊದಲಿಗೆ ಬರುವುದು ಅಮ್ಮಾ ಎಂಬ ಶಬ್ದವೇ. ಆದರೆ ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಅಪ್ಪ-ಅಮ್ಮಂದಿರನ್ನು ಅವರ ಇಳಿವಯಸ್ಸಿನಲ್ಲಿ ಮಕ್ಕಳ ಹೊರದಬ್ಬುವ ಘಟನೆಗಳಂತೂ ಇತ್ತೀಚೆಗೆ ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಇಂಥದ್ದೇ ಒಂದು ಘಟನೆ ಹಾವೇರಿಯಲ್ಲಿಯೂ ನಡೆದಿತ್ತು. ಆದರೆ ತುತ್ತು ನೀಡಿ ಸಲಹುವ ಅಮ್ಮ ಸಿಟ್ಟುಗೊಂಡರೆ ತಿರುಗಿಯೂ ಬೀಳುತ್ತಾಳೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರದ ಈ ಅಮ್ಮ. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಹೊರದಬ್ಬಿದ ಮಕ್ಕಳಿಗೆ ಪಾಠ ಕಲಿಸಿದ್ದಾರೆ ವೀರಾಪುರ ಗ್ರಾಮದ ‘ವೀರ ವನಿತೆ’ ಪ್ರೇಮವ್ವ ಹವಳಣ್ಣನವರ್ (76).
ವಂಶವನ್ನು ಉದ್ಧಾರ ಮಾಡಲು ಗಂಡುಮಕ್ಕಳೇ ಬೇಕು ಎಂದು ಸಿಕ್ಕಸಿಕ್ಕ ದೇವರ ಮೊರೆ ಹೋಗುವವರು, ಹೆಣ್ಣು ಹುಟ್ಟಿದರೆ ಬಸಿರಿನಲ್ಲಿಯೇ ಹೊಸಕಿ ಹಾಕುವವರು, ಹೆಣ್ಣು ಹೆತ್ತ ಸೊಸೆಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡುವ ಜನರ ಮಧ್ಯೆ ಗಂಡುಮಕ್ಕಳು ಇಳಿವಯಸ್ಸಿನ ತಮ್ಮ ಅಪ್ಪ-ಅಮ್ಮಂದಿರನ್ನು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಘಟನೆಯೂ ಒಂದು ಉದಾಹರಣೆಯಾಗಿದೆ.
ಪ್ರೇಮವ್ವನವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಇವರ ಪತಿ ಶ್ರೀಕಾಂತ ನಿಧನರಾದ ನಂತರ ಅವರ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನು ತಮ್ಮ ಪುತ್ರರಾದ ಧನಿಕುಮಾರ ಮತ್ತು ಸಂತೋಷ ಅವರಿಗೆ ಮಾಡಿದ್ದರು ಪ್ರೇಮವ್ವ. ಆಸ್ತಿ ತಮ್ಮ ಕೈಸೇರಿದ್ದೇ ತಡ, ಗಂಡುಮಕ್ಕಳು ತಾಯಿಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದರು.
ಇದಾದದ್ದು ಮೂರು ವರ್ಷಗಳ ಹಿಂದೆ. ಆದರೆ ಪ್ರೇಮವ್ವ ಸುಮ್ಮನೆ ಕಣ್ಣೀರಿಡುತ್ತಾ ಕುಳಿತುಕೊಳ್ಳಲಿಲ್ಲ. ಈ ವಂಶೋದ್ಧಾರಕರ ವಿರುದ್ಧ ಸಿಡಿದೆದ್ದರು. ಆ ಆಸ್ತಿಯನ್ನು ಪುನಃ ಪಡೆದುಕೊಳ್ಳಲು ಸಾಕಷ್ಟು ಹೋರಾಟವನ್ನೂ ಮಾಡಿದರು.
ಈ ಸಮಯದಲ್ಲಿ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದರು. ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಅಧಿಕಾರಿಗಳು ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆ ಬಿಡಿಸಿಕೊಟ್ಟಿದ್ದಾರೆ. ತಹಶೀಲ್ದಾರ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ದಾಖಲೆಗಳ ವಿತರಣೆ ಮಾಡಲಾಗಿದೆ.