ಬೆಂಗಳೂರು: ನನ್ನ ತಾಯಿಯೇ ಮತಾಂತರವಾಗಿದ್ದಾರೆ, ಮನೆಯಲ್ಲಿ ಕುಂಕುಮವಿಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ಹೇಗೆ ಹೇಳುವುದು ನನ್ನ ಗೋಳು ಎಂದು ವಿಧಾನಸಭೆಯಲ್ಲಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಣ್ಣೀರಾದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳು ಮತಾಂತರ ಮಾಡುತ್ತಿವೆ ಎಂಬ ಆರೋಪದ ಕುರಿತು ಬಂದ ಚರ್ಚೆಗೆ ಸಂಬಂಧಿಸಿದಂತೆ ಶೂನ್ಯವೇಳೆಯಲ್ಲಿ ಗೂಳಿಹಟ್ಟಿ ಈ ವಿಷಯವನ್ನು ಪ್ರಸ್ತಾಪಿಸಿದರು. ಹೊಸದುರ್ಗ ಕ್ಷೇತ್ರದಲ್ಲಿ 18-20 ಸಾವಿರ ಜನರನ್ನು ಮತಾಂತರ ಮಾಡಲಾಗಿದೆ. ನನ್ನ ಅಮ್ಮನನ್ನು ಬಿಟ್ಟಿಲ್ಲ. ಕ್ರೈಸ್ತ ಮಿಷನರಿಗಳು ಅವರನ್ನೂ ಬ್ರೇನ್ ವಾಷ್ ಮಾಡಿ ಕಳುಹಿಸಿವೆ. ನಾನು ಈ ವಿಷಯವನ್ನು ಮನೆಯಲ್ಲಿ ಮಾತನಾಡುವಂತೆಯೂ ಇಲ್ಲ. ಮಾತನಾಡಿದರೆ ಸತ್ತೋಗ್ತೀನಿ ಎನ್ನುತ್ತಾರೆ. ಮತಾಂತರ ವಿರೋಧ ಮಾಡಿದರೆ ಚರ್ಚ್‌ನವರು ರೇಪ್ ಕೇಸ್ ಹಾಕಿಸ್ತಾರೆ ಎಂದು ಅವರು ಕಣ್ಣೀರು ಸುರಿಸಿದರು.
ನನ್ನ ತಾಯಿಯ ಮೊಬೈಲ್ ರಿಂಗ್ ಟೋನ್‌ನಲ್ಲಿಯೂ ಕ್ರಿಶ್ಚಿಯನ್ ಹಾಡುಗಳಿವೆ. ಮನೆಯಲ್ಲಿ ಕುಂಕುಮ ಇಡಬಾರದು ಎಂದು ಹೇಳಿದ್ದಾರೆ. ಪೂಜೆಯಂತೂ ಮಾಡುವಂತೆಯೇ ಇಲ್ಲ. ಮನೆಯಲ್ಲಿ ಪೂಜೆಯ ಅವಕಾಶವನ್ನೇ ಕಳೆದುಕೊಂಡಿದ್ದೇವೆ ಎಂದು ಅವರು ನೋವು ತೋಡಿಕೊಂಡರು.
ಆಗ ಮಾತನಾಡಿದ ಶಾಸಕ ಕೆಜಿ ಬೋಪಯ್ಯ, ಮತಾಂತರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಬರಬೇಕಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು. ಇದೇ ಮಾತನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪುಷ್ಟೀಕರಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇದು ಸರ್ಕಾರದ ಗಮನದಲ್ಲೂ ಇದೆ. ಆಮಿಷ ಒಡ್ಡಿ ಮತಾಂತರ ಮಾಡುವುದು ಅಪರಾಧವಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ. ಈ ಸಂಬಂಧ ಕಾನೂನು ತರುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಗೂಳಿಹಟ್ಟಿ ಅವರ ತಾಯಿಯ ವಿಷಯ ಹೇಳುವುದಾದರೆ, ಅವರ ತಾಯಿ ಪುಟ್ಟಮ್ಮ ಸೇರಿದಂತೆ ಹೊಸದುರ್ಗ ತಾಲ್ಲೂಕಿನ ಹಲವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಅವರು ಸ್ವಯಂ ಪ್ರೇರಿತರಾಗಿ ಚರ್ಚ್‌ಗೆ ಹೋಗುತ್ತಿದ್ದಾರೆ. ಇಲ್ಲಿ ಬಲವಂತದ ಮತಾಂತರ ಕಂಡುಬಂದಿಲ್ಲ ಎಂದು ಹೇಳಿ ಪೊಲೀಸರು ಕೇಸನ್ನು ಮುಚ್ಚಿದ್ದರು.
ತಂದೆ ಮತ್ತು ಸಹೋದರ ಮೃತಪಟ್ಟ ಮೇಲೆ ಖಿನ್ನತೆಗೆ ಒಳಗಾಗಿದ್ದ ತಾಯಿಯನ್ನು ಪುಸಲಾಯಿಸಿ ಚರ್ಚ್‌ಗೆ ಕರೆದುಕೊಂಡು ಹೋಗಿ ಮತಾಂತರ ಮಾಡಲಾಗಿದೆ ಎಂದು ಗೂಳಿಹಟ್ಟಿ ಆರೋಪಿಸಿದ್ದರು. ಇಬ್ಬರೂ ಮೃತಪಟ್ಟ ಬಳಿಕ ಪುಟ್ಟಮ್ಮ ಅವರಿಗೆ ದೇವರ ಮೇಲೆ ನಂಬಿಕೆ ಹೋಗಿತ್ತು. ನಂತರ ಅವರು ಕೈಮುರಿದುಕೊಂಡಿದ್ದರು. ಚರ್ಚ್‌ನಲ್ಲಿ ದೀಕ್ಷೆ ಸ್ನಾನ ಮಾಡಿ ಕೈ ಮೇಲೆತ್ತಿದಾಗ ಮುರಿದಿದ್ದ ಕೈ ಸರಿಯಾಗಿತ್ತು. ಅಂದಿನಿಂದ ನಿತ್ಯ ಚರ್ಚ್‌ಗೆ ಹೋಗುತ್ತಿರುವುದಾಗಿ ಪುಟ್ಟಮ್ಮ ತಿಳಿಸಿದ್ದರು.