ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 1246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ಒಂದು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಕೆ.ಸುಧಾಕರ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9,850 ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳು ಇದ್ದು, ಇದರಲ್ಲಿ 2727 ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಾತಿ ಈಗ ನಡೆಸಲಾಗುವುದು ಎಂದು ಸಚಿವರು ಹೇಳಿದರು. 2018ರಲ್ಲಿ 224 ಹುದ್ದೆಗಳಿಗೆ ವಿಶೇಷ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲಾಗಿದೆ. ಈಗಾಗಲೇ 7123 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಕಿ ಹುದ್ದೆಗಳ ನೇಮಕ ನಡೆಯಲಿದೆ ಎಂದರು.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಅವರು ಈ ಮಾಹಿತಿ ನೀಡಿದರು. ಖಾಲಿ ಇರುವ 1246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ನೇರ ನೇಮಕಾತಿಯನ್ನು ಶೀಘ್ರದಲ್ಲಿ ಮಾಡಿಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.
ಇನ್ನು ಆಂಬ್ಯುಲೆನ್ಸ್ ಕುರಿತು ಮಾತನಾಡಿದ ಸಚಿವರು ಆಂಬ್ಯುಲೆನ್ಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. 30ರಿಂದ 35 ಸಾವಿರ ಜನರಿಗೆ ಒಂದು ಆಂಬ್ಯುಲೆನ್ಸ್ ನೀಡಲಾಗುವುದು. ಅಂಬ್ಯುಲೆನ್ಸ್ಗಳಲ್ಲಿ ವಿವಿಧ ರೀತಿಯ ಇನ್ನೂ ಹೆಚ್ಚಿನ 12 ಹೆಚ್ಚುವರಿ ಸೇವೆಗಳನ್ನು ನೀಡಲಾಗುತ್ತದೆ. ಉತ್ಕೃಷ್ಟ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉತ್ತಮವಾದ ಸೇವೆಯನ್ನು ನೀಡಲು ವೈದ್ಯರಿಗೆ ಸೂಚಿಸಲಾಗಿದೆ ಎಂದರು.