ಜಿಲ್ಲೆ

ಚಿತ್ರಮಂದಿರ ಭರ್ತಿಯಾಗತ್ತಾ ಅಥವಾ ಶಾಕ್‌ ಕೊಡತ್ತಾ? ಈ ವಿಚಾರದಲ್ಲಿ ಸರ್ಕಾರದ ನಿಲುವೇನು?

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರನ್ನು ಭೇಟಿ ಮಾಡಿರುವ ಚಿತ್ರ ನಿರ್ಮಾಪಕರ ಸಂಘ, ಕೋವಿಡ್ ಮಾರ್ಗಸೂಚಿಯ ಸಡಿಲಿಕೆ ಮುಂದುವರಿಸುವಂತೆ ಆಗ್ರಹಿಸಿದ್ದಾರೆ.

ಏ.7ರವರೆಗೆ ಮಾತ್ರ ಶೇ.100ರಷ್ಟು ಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಮುಂದುವರಿಸಬೇಕೆಂದು ಆಗ್ರಹಿಸಿದ ನಿಯೋಗ ಈ ಒತ್ತಾಯದ ಅನಿವಾರ್ಯತೆಯನ್ನು ಪ್ರಸ್ತಾಪಿಸಿತು.

ಈಗಾಗಲೇ ನಿರ್ಮಾಪಕರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಆರಂಭದ ವಾರದಲ್ಲಷ್ಟೇ ಭರ್ತಿ ಇರುತ್ತದೆ, ಬಳಿಕ‌ 40-50 ಶೇ. ಪ್ರೇಕ್ಷಕರಿರುತ್ತಾರೆ ಎಂದು ವಿವರಿಸಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಕೆ.ಮಂಜು, ರಮೇಶ್ ಯಾದವ್, ರಾಮಮೂರ್ತಿ ಸೇರಿ ಹಲವರು ನಿಯೋಗದಲ್ಲಿದ್ದರು.

ಬಳಿಕ ಪ್ರತಿಕ್ರಿಯೆ ನೀಡಿದ ಸಚಿವರು, ನಿರ್ಮಾಪಕರು ನಮ್ಮನ್ನು ಭೇಟಿ ಮಾಡಿದ್ದರು. ಮುಂಗಡ ಬುಕ್ಕಿಂಗ್ ಪಡೆಯಲಾಗಿರುತ್ತದೆ‌, ಬುಕ್ಕಿಂಗ್ ಹಣ ವಾಪಸ್ ಕೊಡಲೂ‌ ಆಗುವುದಿಲ್ಲ. ಹೀಗಾಗಿ ಏ.7ರವರೆಗೆ ಅವಕಾಶ ಕೊಡಿ ಎಂದಿದ್ದರು. ಸಿಎಂ ಅವರ ಬೇಡಿಕೆ‌ಗೆ ಒಪ್ಪಿದ್ದರು. ಇದೀಗ ಏ.7ರ ನಂತರವೂ ಪೂರ್ಣ ಪ್ರಮಾಣ‌ಕೊಡಲು ಮನವಿ ಮಾಡಿದ್ದಾರೆ ಎಂದರು.

ಈ ಬಗ್ಗೆ ಸಿಎಂ ಜತೆ ಮಾತನಾಡಿ ತಿಳಿಸುತ್ತೇನೆ ಎಂದಿದ್ದೇನೆ. ಮದುವೆ, ಛತ್ರ, ಸಭಾಂಗಣ ಸೇರಿ ಅನೇಕ ಕಡೆ ನಿರ್ಬಂಧ ಇದೆ. ಈ ಬಗ್ಗೆ ತಾಂತ್ರಿಕ‌ ಸಲಹಾ ಸಮಿತಿಯ ಸಲಹೆ ಪಡೆಯುತ್ತೇವೆ. ನಂತರ ಸಿನಿಮಾ ಮಂದಿರಗಳಲ್ಲಿ ಅವಕಾಶ ನೀಡಬೇಕೇ ಎಂಬುದರ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದರು.