ಜಿಲ್ಲೆ

ಚಾಮರಾಜನಗರದ ಮೊದಲ ಬಿಜೆಪಿ ಶಾಸಕ ಗುರುಸ್ವಾಮಿ ಕರೊನಾದಿಂದ ಸಾವು

suchetana

ಚಾಮರಾಜನಗರ: ಕಳೆದ 12-13 ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ. ಗುರುಸ್ವಾಮಿ ಅವರು ಇಂದು ಮೃತಪಟ್ಟಿದ್ದಾರೆ.

ಇವರಿಗೆ 68 ವರ್ಷ ವಯಸ್ಸಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಇಲ್ಲಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಆಗಸ್ಟ್ 5ರಂದು ಇವರು ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ.

ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಮೊದಲ ಹಾಗೂ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ಜನತಾ ಪಕ್ಷ, ಜನತಾದಳದಿಂದ ತಮ್ಮ ರಾಜಕೀಯ ಜೀವನ ಶುರು ಮಾಡಿದ್ದರು. ಜನತಾದಳ ಇದ್ದಾಗ ಅವಿಭಜಿತ ಮೈಸೂರು ಜಿಲ್ಲೆಯ ಜಿಲ್ಲಾ ಪರಿಷತ್‌ನ ಸದಸ್ಯರಾಗಿದ್ದರು. ಹಿರಿಯ ರಾಜಕೀಯ ನಾಯಕ, ಕೇಂದ್ರದ ಮಾಜಿ ಸಚಿವ ರಾಜಶೇಖರಮೂರ್ತಿಯವರ ಶಿಷ್ಯರಾಗಿದ್ದ ಗುರುಸ್ವಾಮಿಯವರು, ರಾಜಶೇಖರಮೂರ್ತಿಯವರು ಬಿಜೆಪಿ ಸೇರಿದ ನಂತರ ತಾವೂ ಬಿಜೆಪಿ ಸೇರಿದ್ದರು.

1999ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಈ ಮೂಲಕ ಅಂದು ಎರಡು ಬಾರಿ ಗೆದ್ದು ಬಂದಿದ್ದ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಸೋಲಿಸುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದರು.

1999-2004ರಲ್ಲಿ ಕೆಲವು ಕಾರಣಗಳಿಂದ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಜಿ.ಪಂ. ಮಾಜಿ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಕೀಲೆ ನಾಗಶ್ರೀ ಪ್ರತಾಪ್ ಸೇರಿದಂತೆ ಇಬ್ಬರು ಪುತ್ರಿಯರು, ಪತ್ನಿ ಶೀಲಾ ಅವರನ್ನು ಗುರುಸ್ವಾಮಿ ಅಗಲಿದ್ದಾರೆ.