ಮನೆಯಲ್ಲೇ ಮದ್ದು ಕರೊನಾಗೆ ಗುದ್ದು

Corona
Published on

ಬೆಂಗಳೂರು: ಕರೊನಾ ನಿಯಂತ್ರಿಸಲು ಲಾಕ್​ಡೌನ್, ಸೀಲ್​ಡೌನ್, ಕಂಟೇನ್ಮೆಂಟ್ ಝೋನ್ ಎಲ್ಲ ಮಾಡಿ ಆಯ್ತು, ಕಡ್ಡಾಯವಾಗಿ ಮಾಸ್ಕ್​ಧಾರಣೆ, ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವ ಕುರಿತು ಇನ್ನಿಲ್ಲದ ಜಾಗೃತಿ ಸಹ ಮೂಡಿಸಲಾಯಿತು. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಪ್ರತಿ ಮನೆಯಲ್ಲೂ ಕೋವಿಡ್ ಫಸ್ಟ್ ಏಡ್ ಕಿಟ್ ಸಿದ್ದಪಡಿಸಿಕೊಳ್ಳಿ ಎನ್ನುತ್ತಾರೆ ತಜ್ಞರು. ಸೋಂಕು ಏರಿಕೆಯಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ಸಕಾಲಕ್ಕೆ ಆಂಬುಲೆನ್ಸ್ ಸೇವೆ ದೊರೆಯದೆ ಪರದಾಡುವ ಪ್ರಕರಣಗಳು ನಡೆದಿವೆ. ಪರಿಣಾಮ ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್ ಹಾಗೂ ಕ್ವಾರಂಟೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ನಿಮ್ಮ ಮನೆ ಬಾಗಿಲಿಗೆ ಕೋವಿಡ್ ಬಂದರೆ ಹೆದರದೆ ಫಸ್ಟ್ ಏಡ್ ಕಿಟ್​ಗಳೊಂದಿಗೆ ರೋಗ ನಿಯಂತ್ರಿಸಲು ಸನ್ನದ್ಧರಾಗಬೇಕಿದೆ.

ನೀವೇ ಡಾಕ್ಟರ್..!!: ಕರೊನಾ ವ್ಯಾಪಿಸಿದರೆ ಕೂಡಲೇ ಸಾಯುವುದಿಲ್ಲ. ಸೋಂಕು ನಮ್ಮ ಮೇಲೆ ದಾಳಿ ಮಾಡಲು 14 ದಿನಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಸೋಂಕು ಲಕ್ಷಣಗಳ ಬಗ್ಗೆ ಎಚ್ಚೆತ್ತುಕೊಂಡು ಆರಂಭದಲ್ಲೇ ಜಾಗ್ರತೆ ವಹಿಸಿದರೆ ಮಣಿಸಬಹುದಾಗಿದೆ ಎನ್ನುತ್ತಾರೆ ವೈದ್ಯರು. ಕೋವಿಡ್-19 ಮೊದಲ ರೋಗ ಲಕ್ಷಣ ನೆಗಡಿ. ಇದರಿಂದ ಮೂಗು ಸೋರುವಿಕೆ, ಮೂಗು ಕಟ್ಟುವುದು, ಮೂಗಿನಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಆರಂಭದಲ್ಲೇ ಶಮನ ಮಾಡಲು ವೇಪರ್ ಕ್ಯಾಪ್ಸೂಲ್ ಅಥವಾ ನೀಲಗಿರಿ ತೈಲವನ್ನು ಬಿಸಿನೀರಿನಲ್ಲಿ ಹಾಕಿ ಅದರ ಹಬೆ ತೆಗೆದುಕೊಳ್ಳಬೇಕು. ಎರಡನೆಯ ಲಕ್ಷಣ ಗಂಟಲು ಉರಿ ಮತ್ತು ತುರಿಕೆ. ಈ ವೇಳೆ ಔಷಧಾಲಯದಲ್ಲಿ ಸಿಗುವ ಗಾರ್ಗಲರ್ ಅನ್ನು ಒಂದು ಲೋಟ ಬಿಸಿನೀರಿಗೆ ಬೆರೆಸಿ ಗಾರ್ಗಲ್ ಮಾಡಬೇಕು ಇದರಿಂದ ಉರಿ ಮತ್ತು ತುರಿಕೆ ಕಡಿಮೆಯಾಗುತ್ತದೆ. ಜತೆಗೆ ಯಥೇಚ್ಚವಾಗಿ ಬಿಸಿನೀರು ಕುಡಿಯಬೇಕು. ಮೂರನೆಯ ಲಕ್ಷಣ ಕೆಮ್ಮು. ಇದಕ್ಕೆ ಗಾರ್ಗಲ್ ಜತೆಗೆ ಹಬೆ ತೆಗೆದುಕೊಳ್ಳಬೇಕು. ವಿಟಮಿನ್ ಡಿ ಮತ್ತು ಇ ಮಾತ್ರೆ ಸೇವಿಸಬೇಕು. ಬಿಸಿನೀರು, ಬಿಸಿ ಆಹಾರ ಸೇವಿಸಬೇಕು. ಈ ಯಾವುದೇ ಲಕ್ಷಣಗಳು ಕಂಡುಬಂದರೂ ಈ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದರ ಜತೆಗೆ ಥಮೋಮೀಟರ್ ಮೂಲಕ ದೇಹದ ಉಷ್ಣಾಂಶ ಹಾಗೂ ಆಕ್ಸಿಮೀಟರ್​ನಿಂದ ಆಕ್ಸಿಜನ್ ಮಟ್ಟ ಪರೀಕ್ಷಿಸಿಕೊಳ್ಳಬೇಕು. ಈ ವೇಳೆ ದೇಹದ ಉಷ್ಣತೆ 100 ಡಿಗ್ರಿ ಮೀರಿದರೆ, ಆಕ್ಸಿಜನ್ ಮಟ್ಟ 90ಕ್ಕಿಂತ ಕಡಿಮೆ ಇದ್ದರೆ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು ಎಂದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದ್ದಾರೆ.

ಏನೇನಿರಬೇಕು?

ಗಾರ್ಗಲರ್, ಜ್ವರದ ಮಾತ್ರೆ, ವಿಟಮಿನ್ ಡಿ ಮತ್ತು ಇ, ಜಿಂಕ್ ಮಾತ್ರೆ, ವೇಪರ್ ಕ್ಯಾಪ್ಸಲ್, ಆಕ್ಸಿಮೀಟರ್, ಥರ್ವಮೀಟರ್.

ಚೇತರಿಕೆ ಪ್ರಮಾಣ ಶೇ. 65.13ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ 8,387 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಚೇತರಿಕೆ ಪ್ರಮಾಣ ಶೇ. 65.13ಕ್ಕೆ ಏರಿಕೆಯಾಗಿದೆ. 7,665 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 139 ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 2,40,948ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 4,201 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟಾರೆ ಗುಣರಾದವರ ಸಂಖ್ಯೆ 1,56,949 ತಲುಪಿದೆ. ಉಳಿದಂತೆ 79,782 ಸೋಂಕಿತರ ರಾಜ್ಯದ ನಾನಾ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರ ಗಳಲ್ಲಿ ದಾಖಲಾಗಿದ್ದಾರೆ. ಕೆಲವರು ಹೋಂ ಐಸೋಲೇಷನ್​ನಲ್ಲಿದ್ದು, 697 ಸೋಂಕಿತರು ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಹೊಸ ಪ್ರಕರಣಗಳು?: ಬೆಂಗಳೂರು ನಗರದಲ್ಲಿ 2,242, ಬಳ್ಳಾರಿ 673, ಉಡುಪಿ 421, ಬೆಳಗಾವಿ 395, ಮೈಸೂರು 357, ದಾವಣಗೆರೆ 332, ಶಿವಮೊಗ್ಗ 318, ದಕ್ಷಿಣ ಕನ್ನಡ ಮತ್ತು ದಾವಣಗೆರೆ 279, ಕಲಬುರಗಿ 229, ಗದಗ 186, ಹಾಸನ 177, ಮಂಡ್ಯ 174, ಬಾಗಲಕೋಟೆ ಮತ್ತು ರಾಯಚೂರು ತಲಾ 171, ಕೊಪ್ಪಳ 142, ಚಿಕ್ಕಮಗಳೂರು 145, ಬೆಂಗಳೂರು ಗ್ರಾಮಾಂತರ 123, ರಾಮನಗರ 115, ಯಾದಗಿರಿ 107, ಹಾವೇರಿ 109, ಬೀದರ್ 99, ಉತ್ತರ ಕನ್ನಡ 80, ಚಿಕ್ಕಬಳ್ಳಾಪುರ 82,ಕೋಲಾರ 71, ವಿಜಯಪುರ 64, ತುಮಕೂರು 46, ಚಿತ್ರದುರ್ಗ 41, ಚಾಮರಾಜನಗರ 21, ಕೊಡಗಿನ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿಗೆ 139 ಮಂದಿ ಬಲಿ: ಬೆಂಗಳೂರು ನಗರದಲ್ಲಿ 49, ಧಾರವಾಡ 10, ಬಳ್ಳಾರಿ ಮತ್ತು ದಕ್ಷಿಣ ಕನ್ನಡ ತಲಾ 9, ಬೀದರ್ 8, ಹಾಸನ ಮತ್ತು ಬೆಳಗಾವಿ ತಲಾ 7, ಮೈಸೂರು 6, ರಾಯಚೂರು ಮತ್ತು ತುಮಕೂರು ತಲಾ 4, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ವಿಜಯಪುರ, ಯಾದಗಿರಿ ಮತ್ತು ಹಾವೇರಿ ತಲಾ 3, ಗದಗ, ಮಂಡ್ಯ ಮತ್ತು ಕಲಬುರಗಿ ತಲಾ 2, ಬಾಲಕೋಟೆ, ಚಾಮರಾಜನಗರ, ದಾವಣಗೆರೆ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ 139 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net