ಬಂಟ್ವಾಳ: ರೇಷನ್ ಕಾರ್ಡ್ ವಿತರಣೆ ನಡೆಯುವ ತಾಲೂಕಿನ ಆಡಳಿತ ಸೌಧದ ಕಚೇರಿಯ ಆಹಾರ ಶಾಖೆಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಂಗಳವಾರ ಭೇಟಿ ನೀಡಿ ಜನರಿಗೆ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಮತ್ತು ಮಂಗಳವಾರ ಎರಡು ದಿನ ಕಂದಾಯ ಇಲಾಖೆಯಲ್ಲಿ ರೇಷನ್ ಕಾರ್ಡ್ ಪಡೆಯುವುದಕ್ಕೆ ನೂರಾರು ಜನ ಸೇರಿದ್ದು, ಇಡೀ ದಿನ ಇಲಾಖೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಫಲಾನುಭವಿಗಳು ಶಾಸಕರಿಗೆ ದೂರು ನೀಡಿದ್ದರು. ಶಾಸಕರು ಭೇಟಿ ನೀಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು, ಅಧಿಕಾರಿಗಳನ್ನು ಕರೆದು ಜನರಿಗೆ ತೊಂದರೆಯಾಗದಂತೆ ರೇಷನ್ ಕಾರ್ಡ್ ವಿತರಿಸಲು ತಿಳಿಸಿದರು.
ಡಿ.31 ಕಾರ್ಡ್ ನೀಡಲು ಕೊನೆಯ ದಿನ ಎಂದು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹರಡುತ್ತಿದ್ದು, ಜನರು ಕಚೇರಿಗೆ ಅಲೆದಾಡುವಂತಾಗಿದೆ. ರೇಷನ್ ಕಾರ್ಡ್ ಪಡೆಯಲು ಇನ್ನೂ ಕಾಲಾವಕಾಶ ನೀಡಲಾಗಿದ್ದು, ಜನರು ಯಾವುದೇ ಭಯಪಡೆಯಬೇಕಾಗಿಲ್ಲ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಮಾಧ್ಯಮ ಮೂಲಕ ತಹಸೀಲ್ದಾರ್ ನೀಡಲಿ ಎಂದು ಶಾಸಕರು ಸೂಚನೆ ನೀಡಿದರು.
ಪ್ರಮುಖರಾದ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ, ಶಶಿಕಾಂತ್ ಶೆಟ್ಟಿ ಆರುಮುಡಿ, ಅನೂಪ್ ಮಯ್ಯ, ಮೋಹನ್ ಪಿ.ಎಸ್, ಶಿವರಾಜ್ ಕಾಂದಿಲ, ಪ್ರಣಾಮ್ ಅಜ್ಜಿಬೆಟ್ಟು, ಆನಂದ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.