ಜಿಲ್ಲೆ

ಕರ್ನಾಟಕ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಹತ್ಯೆ

ಬಳ್ಳಾರಿ: ಕರ್ನಾಟಕ ಮೂಲದ ಸ್ವಾಮಿಜಿಯೊಬ್ಬರು ಖದೀಮರಿಂದ ಹತ್ಯೆಯಾಗಿದ್ದಾರೆ ಎನ್ನಲಾದ ಘಟನೆ ಮಹಾರಾಷ್ಟ್ರದಲ್ಲಿ ನಿನ್ನೆ (ಶನಿವಾರ) ರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ರುದ್ರಪಶುಪತಿ ಶಿವಾಚಾರ್ಯ ಶ್ರೀ ಹತ್ಯೆಗೀಡಾದ ಸ್ವಾಮೀಜಿ. ಮಠದ ಕಳ್ಳತನಕ್ಕೆ ಬಂದ ಕಳ್ಳರು ರಾತ್ರಿ ಪೀಠಾಧಿಪತಿಯನ್ನು ಕತ್ತು ಹಿಸುಕಿ ಸಾಯಿಸಿರುವ ಸಂಶಯ ವ್ಯಕ್ತವಾಗಿದೆ.

ರುದ್ರಪಶುಪತಿ ಶ್ರೀಗಳು ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದವರು. ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಪತಿಯಾಗಿದ್ದರು. ನಾಗಠಾಣದ ನಿರ್ವಾಣಿ ಮಠವು ಉಜ್ಜಯಿನಿ ಪೀಠದ ಶಾಖಾ ಮಠವಾಗಿದೆ.

ರುದ್ರಪಶುಪತಿ ಶ್ರೀಗಳು ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಮಠದ ಪೀಠಾಧಿಪತಿಯಾದ ಮಹೇಶ್ವರ ಮಹಾಸ್ವಾಮಿಗಳ ಸಹೋದರರೂ ಹೌದು. ಸಹೋದರನ ಹತ್ಯೆ ವಿಷಯ ತಿಳಿಯುತ್ತಲೇ ಮಹೇಶ್ವರ ಮಹಾಸ್ವಾಮಿಗಳು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. (ದಿಗ್ವಿಜಯ ನ್ಯೂಸ್​)