ಬೆಂಗಳೂರು: ನನ್ನ ತಾಯಿ ಆಸೆಪಟ್ಟರು ಎಂದು ನಾನು ಜಮೀನು ಖರೀದಿಸಿದೆ. ರಸ್ತೆ ವಿಚಾರಲ್ಲಿ ಜಗಳ ಆಗಿದೆ. ನಮಗೆ ತೊಂದರೆ ಕೊಡುವವರನ್ನು ನಾನು ಬಿಡುವುದಿಲ್ಲ ಎಂದು ನಟ ಯಶ್ ಹೇಳಿದರು.
ಜಮೀನು ಗಲಾಟೆ ವಿಚಾರವಾಗಿ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಯಶ್, ನಾನು ಆ ಜಾಗ ತೆಗೆದುಕೊಂಡಿದ್ದು, ವ್ಯವಸಾಯಕ್ಕಾಗಿ. ದೊಡ್ಡ ಜಾಗವನ್ನು ತೆಗೆದುಕೊಂಡಾಗ ಸಾಮಾನ್ಯವಾಗಿ ಸಮಸ್ಯೆಯಾಗುತ್ತದೆ. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ತೇವೆ. ನಮ್ಮ ಜಾಗದಲ್ಲಿ ಕೆಲವೊಂದು ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜಗವನ್ನು ಭದ್ರ ಮಾಡಿಕೊಳ್ಳಬೇಕು. ಹೀಗಾಗಿ ಕಾಂಪೌಂಡ್ ಹಾಕಬೇಕಿದೆ ಎಂದು ಯಶ್ ತಿಳಿಸಿದರು.
ರಸ್ತೆ ವಿಚಾರಕ್ಕೆ ಜಗಳ ನಡೆದಿದೆ. ರಸ್ತೆ ಮಾಡಿಕೊಡಲು ಸರ್ಕಾರಕ್ಕೆ ಹೇಳಿದ್ದೇನೆ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ನಮಗಿಲ್ಲ. ಇಂತಹ ಜಗಳಗಳು ಸಾಮಾನ್ಯ. ನಾವೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಕೋಪದಲ್ಲಿ ಒಂದೆರಡು ಮಾತುಗಳನ್ನು ಆಡಿರಬಹುದು. ಅದರಿಂದ ನೋವಾಗಿದ್ದರೆ ಕ್ಷಮಿಸಿ. ನಾನು ಬೇರೆ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಈ ಸಮಸ್ಯೆ ಬಗೆಹರಿಸಲು ಸಮಯ ಬೇಕಾಗುತ್ತದೆ. ಎಲ್ಲವನ್ನು ಸರಿ ಮಾಡುತ್ತೇನೆಂದರು.
ಇದೇ ವೇಳೆ ಘಟನೆಗೆ ರಾಜಕೀಯ ಸ್ವರೂಪ ಇರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಶ್, ಹಾಗೇನು ಇಲ್ಲ. ಇದೊಂದು ಸಾಮಾನ್ಯ ಜಗಳವಷ್ಟೇ. ಹಾಗೇನಾದರೂ ರಾಜಕೀಯ ಸ್ವರೂಪ ಇದ್ದಲ್ಲಿ. ಏನು ಮಾಡಬೇಕೆಂದು ನನಗೆ ತಿಳಿದಿದೆ. ನಮಗೆ ತೊಂದರೆ ಕೊಡುವವರನ್ನು ನಾನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್)