ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಆಯ್ಕೆ: ಸಂಜೆ 4ಕ್ಕೆ ಪ್ರಮಾಣ ವಚನ ಸ್ವೀಕಾರ

Tirat sing
Published on

ಡೆಹ್ರಾಡೂನ್​: ತ್ರಿವೇಂದ್ರ ಸಿಂಗ್​ ರಾವತ್​ ರಾಜೀನಾಮೆಯಿಂದ ತೆರವಾದ ಉತ್ತರಾಖಂಡದ ಮುಖ್ಯಮಂತ್ರಿ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಅವರು ಆಯ್ಕೆಯಾಗಿದ್ದಾರೆ.

ತಿರತ್​ ಸಿಂಗ್​ ಅವರು ಇಂದು ಸಂಜೆ ನಾಲ್ಕು ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಿರತ್​ ಅವರು ಫೆ. 9, 2013 ರಿಂದ ಡಿಸೆಂಬರ್​ 31, 2015ರವರೆಗೂ ಉತ್ತರಖಂಡದ ಬಿಜೆಪಿ ಮುಖ್ಯಸ್ಥರಾಗಿದ್ದರು. 2012 ರಿಂದ 2017ರವರೆಗೆ ಉತ್ತರಖಂಡದ ಚೌಬ್ತಖಾಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಲ್ಲದೆ, ಗರ್ವಾಲ್​ ಕ್ಷೇತ್ರದ ಸಂಸದರಾಗಿದ್ದಾರೆ.

ತ್ರಿವೇಂದ್ರ ಸಿಂಗ್​ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಗೆ ಮಂಗಳವಾರ ಸಂಜೆ ರಾಜೀನಾಮೆ ಪತ್ರ ನೀಡಿದ ಬಳಿಕ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಬಿಜೆಪಿ ನನಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದರು.

ರಾಜೀನಾಮೆಗೆ ಕಾರಣವೇನೆಂದು ಕೇಳಿದಾಗ, ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲಿರುವ ಬಿಜೆಪಿ ನಾಯಕರನ್ನು ಕೇಳಬೇಕು ಎಂದಿದ್ದರು. ಪಕ್ಷದಲ್ಲಿನ ಎಲ್ಲಾ ನಿರ್ಧಾರಗಳನ್ನು ಸಾಮೂಹಿಕ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ನಾನು ಈಗ ಬೇರೊಬ್ಬರಿಗೆ ಅಧಿಕಾರವನ್ನು ರವಾನಿಸಬೇಕು ಎಂದು ಪಕ್ಷವು ಒಟ್ಟಾಗಿ ನಿರ್ಧರಿಸಿದೆ. ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲೇ ಕೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.

ತ್ರಿವೇಂದ್ರ ಅವರ ಕಾರ್ಯಶೈಲಿ ವಿಭಿನ್ನವಾಗಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವಾರು ಉತ್ತರಾಖಂಡ ಮಂತ್ರಿಗಳು ಮತ್ತು ಶಾಸಕರು ಹೈ ಕಮಾಂಡ್​ಗೆ ಮನವಿ ಮಾಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net