ದಕ್ಷಿಣ ಕನ್ನಡದ ಪಾಣಾಜೆ ಬಳಿ ಕರ್ನಾಟಕ-ಕೇರಳ ರಸ್ತೆ ಬಂದ್  
ಜಿಲ್ಲೆ

ಕರೊನಾ ಭಯದಲ್ಲಿ ರಸ್ತೆ ಬಂದ್​; ಗಡಿ ಪ್ರದೇಶಗಳಲ್ಲಿ ಮೂರನೇ ಅಲೆಯ ಗಡಿಬಿಡಿ

ವಿಜಯಪುರ/ಮಂಗಳೂರು: ಕರೊನಾ ಆರಂಭವಾದಾಗ ಬಹಳಷ್ಟು ಊರುಗಳಲ್ಲಿ ಹೊರಗಿನವರು ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದ ಪ್ರಕರಣಗಳು ಈಗ ಮರುಕಳಿಸಿದ್ದು, ಇಂಥವು ಮತ್ತಷ್ಟು ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಈಗಾಗಲೇ ಕೆಲವಡೆ ರಸ್ತೆ ಬಂದ್​ ಮಾಡಿರುವಂಥ ಸನ್ನಿವೇಶಗಳು ಕಂಡುಬಂದಿವೆ.

ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿಂದ ತಮ್ಮಲ್ಲಿಗೆ ಬಂದೀತು ಎಂಬ ಭಯದಲ್ಲಿ ಅನೇಕರು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್​ ಮಾಡಲಾರಂಭಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಭೀಮಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಹಿಂಗಣಿ ಬ್ಯಾರೇಜ್ ಮೇಲಿನ ಸಂಚಾರ ಬಂದ್ ಮಾಡಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿರೋ ಹಿಂಗಣಿ ಬ್ಯಾರೇಜ್ ಮೇಲೆ ಜೆಸಿಬಿ ಮೂಲಕ ಮಣ್ಣಿನ ಒಡ್ಡು ಹಾಕಿ ಮುಳ್ಳು ಕಂಟಿಗಳನ್ನು ಪೊಲೀಸರ ಸಮ್ಮುಖದಲ್ಲೇ ಇರಿಸಲಾಗಿದೆ.

ಆದರೆ ಕೆಲವರು ಬ್ಯಾರೇಜ್ ಮೇಲೇ ಬೈಕ್​ಗಳನ್ನು ಹತ್ತಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಿರುವ ಪ್ರಕರಣಗಳೂ ಕಂಡುಬಂದಿವೆ. ಇನ್ನೊಂದೆಡೆ ಕೇರಳಲ್ಲಿ ಕರೊನಾ ಹಾವಳಿ ಇರುವುದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಬಂದ್​ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪಾಣಾಜೆ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಜಿಲ್ಲಾಡಳಿತವೇ ಬಂದ್​ ಮಾಡಿದೆ. ಸದ್ಯದಲ್ಲೇ ಗಡಿಭಾಗದ ಇನ್ನೂ ಕೆಲವೆಡೆ ಹೀಗೆ ಸಂಪರ್ಕ ಕಡಿತಗೊಂಡರೂ ಅಚ್ಚರಿ ಇಲ್ಲ.