ಜಿಲ್ಲೆ

ಪ್ರಾಣಕಂಟಕ ರಸ್ತೆ ವಿಭಜಕ!: ಕೆಸರು ಮಿಶ್ರಿತ ಮಣ್ಣಿನಲ್ಲಿ ಸಿಲುಕಿದ ಮೂವರ ರಕ್ಷಣೆ ಕ್ರಮಕ್ಕೆ ಆಗ್ರಹ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ರಾ.ಹೆ. 48ರ ಚತುಷ್ಪಥ ಕಾಮಗಾರಿಯ ಉಭಯ ಪಥಗಳ ನಡುವೆ ವಿಭಜಕ ರಚಿಸಲು ಹಾಕಿರುವ ಮಣ್ಣಿನಲ್ಲಿ ಸತತ ಎರಡನೇ ದಿನವೂ ಮಹಿಳೆಯರು ಹೂತು ಹೋಗಿದ್ದು, ಸಕಾಲಿಕ ಕಾರ್ಯಾಚರಣೆಯಿಂದ ಮಹಿಳೆಯರನ್ನು ರಕ್ಷಿಸಲಾಯಿತು.

ಈ ಹಿಂದೆ ಇದ್ದ ಹೆದ್ದಾರಿಯಿಂದ ಶಾಲಾ ರಸ್ತೆ ಮತ್ತು ದೇವಸ್ಥಾನ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ತೆರವು ಮಾಡಲಾಗಿತ್ತು. ಆ ಮಧ್ಯೆ ಮಂಗಳೂರು ಬೆಂಗಳೂರು ನಡುವೆ ನೇರ ಸಂಪರ್ಕಿಸುವ ಬಸ್‌ಗಳು ಉಪ್ಪಿನಂಗಡಿಯ ಬಸ್ ನಿಲ್ದ್ದಾಣಕ್ಕೆ ಬಾರದೇ ಮೇಲ್ಸೇತುವೆ ಪ್ರಾರಂಭಗೊಳ್ಳುವ ಸ್ಥಳದಲ್ಲಿಯೇ ಪ್ರಯಾಣೀಕರನ್ನು ಇಳಿಸುವುದರಿಂದಾಗಿ ಮತ್ತು ಬಸ್ ನಿಲ್ದಾಣಕ್ಕೆ ಹೋಗುವ ಬಸ್‌ಗಳ ಪ್ರಯಾಣಿಕರೂ ಸುತ್ತು ಬಳಸಿ ಬಾರದೇ ಈ ಹಿಂದಿದ್ದ ರಸ್ತೆಯಲ್ಲೇ ಬರುತ್ತಿರುವುದು ಸಾಮಾನ್ಯವಾಗಿದೆ.

ಈ ಮಧ್ಯೆ ಎರಡು ಪಾರ್ಶ್ವಗಳ ಹೆದ್ದಾರಿಯ ನಡುವೆ ವಿಭಜಕದ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆಯಿಂದ ಮಣ್ಣು ಮೃದುವಾಗಿ ಕಾಲಿಟ್ಟರೆ ಹೂತು ಹೋಗುವಂತಾಗಿದೆ.

ಅಪಾಯಕ್ಕೆ ಸಿಲುಕಿದ ಮೂವರ ರಕ್ಷಣೆ

ಕಳೆದ ಮಂಗಳವಾರ ಶಾಲೆಗೆ ನಿಗದಿತ ಅವಧಿಯೊಳಗೆ ತಲುಪುವ ಧಾವಂತದಲ್ಲಿದ್ದ ಶಿಕ್ಷಕಿಯೋರ್ವರು ಬಸ್‌ನಿಂದ ಹೆದ್ದಾರಿಯಲ್ಲಿಯೇ ಇಳಿದು, ವಿಭಜಕಕ್ಕೆ ಹಾಕಲಾದ ಮಣ್ಣಿಗೆ ಕಾಲಿರಿಸಿದ್ದಾರೆ. ಇದರಿಂದಾಗಿ ಸೊಂಟದವರೆಗೆ ಹೂತು ಹೋಗಿದ್ದ ಅವರನ್ನು ಸಮೀಪದಲೇ ಇದ್ದ ಜೆಸಿಬಿ ಯಂತ್ರ ಬಳಸಿ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಬುಧವಾರ ಖಾಸಗಿ ವಿದ್ಯಾಸಂಸ್ಥೆಯ ಶಾಲಾ ಪರಿವೀಕ್ಷಕಿ ಮೀನಾಕ್ಷಿ ಎಂಬುವರು ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾ ಚಾಲಕ ರಕ್ಷಣೆಗೆ ಧಾವಿಸಿದ್ದುಮ ಅವರೂ ಕೂಡಾ ಮಣ್ಣಿನಲ್ಲಿ ಹೂತು ಹೋಗಿದ್ದು ಹರಸಾಹಸಪಟ್ಟು ಮೇಲೆದ್ದರು. ಬಳಿಕ ಪರಿವೀಕ್ಷಕಿಯನ್ನು ಮೇಲೆತ್ತಲಾಯಿತು.

ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ

ಹೆದ್ದಾರಿ ಮಧ್ಯದಲ್ಲಿ ಅಳವಡಿಸಲಾದ ರಸ್ತೆ ವಿಭಾಜಕ ಸ್ಥಳವು ಆಳವಾಗಿದ್ದು, ಇತ್ತೀಚೆಗಷ್ಟೇ ಮಣ್ಣು ಹಾಕಿರುವುದರಿಂದ ಮಳೆ ನೀರಿನಿಂದ ಸಡಿಲಗೊಂಡು ಅಪಾಯಕಾರಿಯಾಗಿ ಪರಿಣಮಿಸಿದೆ. ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಜನರನ್ನು ಈ ಭಾಗದ ಮೂಲಕ ಸಂಚರಿಸದಂತೆ ಎಚ್ಚರಿಸಲು ಸೂಚನಾಫಲಕ ಅಳವಡಿಸದೆ ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಯಾವುದೇ ರೀತಿಯಲ್ಲಿ ಅಪಾಯದ ಮುಂಜಾಗ್ರತಾ ಫಲಕ ಅಳವಡಿಸದ ಕಾರಣ ನಾನು ಸಹಿತ ಹಲವರು ಇಲ್ಲಿ ಹೂತು ಹೋಗಿ ಸಮಸ್ಯೆಗೆ ಸಿಲುಕಿದೆವು. ಬೊಬ್ಬೆ ಹೊಡೆದು ಸಹಾಯ ಯಾಚಿಸಿ ರಕ್ಷಿಸಲ್ಪಟ್ಟಿದ್ದೇವೆ. ಆದರೆ ಇದೇ ರೀತಿಯಲ್ಲಿ ಪುಟ್ಟ ಮಕ್ಕಳು ಈ ರಸ್ತೆಯಲ್ಲಿ ದಾಟಿ ಶಾಲೆಗೆ ತಲುಪಲು ಮುಂದಾದರೆ ಪ್ರಾಣಾಪಾಯ ಸಂಭವಿಸುವುದು ಶತಸಿದ್ಧ. ಮಕ್ಕಳು ಹುದುಗಿ ಹೋದರೆ ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿ ಪ್ರಾಣಪಾಯವಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಮಧ್ಯದ ಇಂತಹ ಅಪಾಯಕಾರಿ ಸ್ಥಳಗಳಲ್ಲಿ ತುರ್ತಾಗಿ ಜನಸಂಚಾರಕ್ಕೆ ನಿರ್ಬಂಧ ವಿಧಿಸಬೇಕು. ಅಥವಾ ಸಮಸ್ಯೆಯನ್ನು ಸರಿಪಡಿಸಬೇಕು. ಮೀನಾಕ್ಷಿ ಮಣ್ಣಿನಲ್ಲಿ ಹೋತು ಹೋಗಿದ್ದ ಮಹಿಳೆ