| ಸತೀಶ್ ಕಂದಗಲ್ಪುರ ಬೆಂಗಳೂರು
ರಾಜಧಾನಿಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯಿಂದ 36 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡು ವರ್ಷಗಳಲ್ಲಿ ಕೇವಲ 7 ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 29 ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗಳ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ವಾಹನದಟ್ಟಣೆ ಸಮಸ್ಯೆ ಮತ್ತೆ ಕಾಡುತ್ತಿದೆ.
ಬೈಕ್, ಕಾರು, ಆಟೋ, ಟೆಂಪೋ ಟ್ರಾವೆಲರ್, ಬಸ್, ಲಾರಿ ಹಾಗೂ ಇತರೆ ವಾಹನಗಳು ಸೇರಿ ನಗರದಲ್ಲಿ ಸುಮಾರು 75 ಲಕ್ಷಕ್ಕೂ ಅಧಿಕ ವಾಹನಗಳಿವೆ. ರಿಚ್ಮಂಡ್ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಬಾ ರಸ್ತೆ, ಬ್ರಿಗೇಡ್ ರಸ್ತೆ, ರಾಜಭವನ ಸೇರಿ ಹಲವು ರಸ್ತೆಗಳಲ್ಲಿ ಪ್ರತಿ ಗಂಟೆಗೆ ಸುಮಾರು 3ರಿಂದ 6 ಸಾವಿರಕ್ಕೂ ಅಧಿಕ ವಾಹನ ಸಂಚರಿಸುತ್ತಿವೆ. ಹೆಚ್ಚು ವಾಹನಸಂದಣಿ ಕಂಡುಬರುವ ಗಾಂಧಿನಗರ, ಶಿವಾಜಿನಗರ, ಮಲ್ಲೇಶ್ವರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಹಂತದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಲಾಕ್ಡೌನ್ ತೆರವು ಮಾಡಿರುವುದರಿಂದ ಈ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ.
ಸ್ಮಾರ್ಟ್ ಕಾರ್ಯ ನಿರ್ವಹಣೆ ವಿಫಲ: ಬಿಬಿಎಂಪಿ ವತಿಯಿಂದ ದೀರ್ಘ ಬಾಳಿಕೆ ಬರುವ ರಸ್ತೆಗಳನ್ನು ನಿರ್ವಿುಸಲು ವಿಫಲವಾಗಿದ್ದರಿಂದ ವಾಹನದಟ್ಟಣೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರ ಸ್ಮಾರ್ಟ್ ಸಿಟಿ ಲಿ. ಸಂಸ್ಥೆಗೆ ವಹಿಸಲಾಯಿತು. ಆದರೆ, ಈವರೆಗೆ ಈ ಸಂಸ್ಥೆಯೂ ‘ಸ್ಮಾರ್ಟ್’ ಆಗಿ ಕೆಲಸ ಮಾಡದೆ, ಎಲ್ಲ ಕಾಮಗಾರಿಗಳನ್ನು ಒಟ್ಟೊಟ್ಟಿಗೆ ಕೈಗೊಂಡು ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ. ಮೊದಲ ಹಂತದ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ನಂತರ 2ನೇ ಹಂತವನ್ನು ಕೈಗೊಳ್ಳದೆ, ಎಲ್ಲವನ್ನೂ ಒಂದೇ ಅವಧಿಯಲ್ಲಿ ಆರಂಭಿಸಿದೆ. ಹೀಗಾಗಿ, ನಗರದ ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಮಿಲ್ಲರ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ ರಸ್ತೆ, ರೇಸ್ಕೋರ್ಸ್ ರಸ್ತೆ, ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ, ಡಿಕನ್ಸನ್ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ 1 ಕಿ.ಮೀ. ರಸ್ತೆ ದಾಟಲು 10 ನಿಮಿಷ ವ್ಯಯಿಸಬೇಕಿದೆ.
ಮುಕ್ತಾಯ ಅವಧಿ ಹೇಳಲಾಗದು: ಕಾಮಗಾರಿ ವಿಳಂಬದಲ್ಲಿ ತಮ್ಮದೇನೂ ವಿಳಂಬವಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸುತ್ತಾರೆ. ಸಾರ್ವಜನಿಕರು, ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ ಮತ್ತು ಇತರೆ ಇಲಾಖೆಗಳೊಂದಿನ ಸಮನ್ವಯ ಸಾಧಿಸುವುದು ವಿಳಂಬ ಆಗುತ್ತದೆ. ಜತೆಗೆ, ಜನಸಂಚಾರ ಪ್ರದೇಶಗಳಲ್ಲಿ ಕೆಲಸ ಮುಗಿಸಲು 9 ತಿಂಗಳಿಂದ 1 ವರ್ಷ ಅವಧಿ ಇದ್ದರೂ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಟೆಂಡರ್ ನೀಡುವಾಗ ನಿಗದಿಗೊಳಿಸಿದ ಅವಧಿಗೆ ಕೆಲಸ ಪೂರ್ಣ ಗೊಳಿಸುವುದಿಲ್ಲ. ಟ್ರಾಫಿಕ್ ಇಲ್ಲದಿರುವ ಕಡೆ ಸಣ್ಣ ಪುಟ್ಟ ಉಳಿಕೆ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬಹುದು ಎನ್ನುತ್ತಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕಾರ್ವಿುಕರ ಕೊರತೆ: ಬಿಬಿಎಂಪಿ ಕೈಗೆತ್ತಿಕೊಂಡಿರುವ ಕೆಲವು ರಸ್ತೆಗಳ ಡಾಂಬರೀಕರಣ ಮತ್ತು ವೈಟ್ ಟಾಪಿಂಗ್ ಕಾಮಗಾರಿಗಳು ಲಾಕ್ಡೌನ್ ಅವಧಿಯಲ್ಲಿ ವೇಗವಾಗಿ ಸಾಗಿವೆ. ಆದರೆ, ಸ್ಮಾರ್ಟ್ ಸಿಟಿ ಸಂಸ್ಥೆ ನಿರ್ವಹಿಸುತ್ತಿರುವ ಕಾಮಗಾರಿಗಳಿಗೆ ಲಾಕ್ಡೌನ್ ಅವಧಿಯಲ್ಲಿ ಕಾರ್ವಿುಕರ ಕೊರತೆ ಉಂಟಾಗಿದೆ. ಹೀಗಾಗಿ, ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಜತೆಗೆ, ಅಭಿವೃದ್ಧಿ ಕಾರ್ಯಕ್ಕೆ ಕಬ್ಬಿಣ, ಸಿಮೆಂಟ್, ನೀರು ಟ್ಯಾಂಕರ್ ಹಾಗೂ ಇತರೆ ಉಪಕರಣ ಖರೀದಿಗೆ ತೊಂದರೆಯಾಗಿದೆ. ಹೀಗಾಗಿ, ಕಾಮಗಾರಿ ನಿಧಾನವಾಗಿ ಸಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಗಡುವಿನಲ್ಲಿ ಪೂರ್ಣಗೊಳ್ಳಲ್ಲ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ.30ರಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಮಾಡುತ್ತಿರುವ ರೇಸ್ ಕೋರ್ಸ್ ರಸ್ತೆ, ಅಂಬೇಡ್ಕರ್ ರಸ್ತೆ, ಐಟಿಸಿ ಜಂಕ್ಷನ್, ರಾಜಾರಾಮ್ ಮೋಹನ್ರಾಯ್ ರಸ್ತೆ, ಹೇಯ್ ್ಸ ರಸ್ತೆ ಜಂಕ್ಷನ್, ಎಸ್ಬಿಐ ಜಂಕ್ಷನ್, ಎಂ.ಜಿ. ರಸ್ತೆ, ರಾಜಭವನ ಜಂಕ್ಷನ್, ತಾರಾಲಯ ಜಂಕ್ಷನ್ಗಳಲ್ಲಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಎಲ್ಲ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಜೂನ್- ಜುಲೈ ಒಳಗೆ ಪೂರ್ಣ ಮಾಡಲಾಗುವುದು. ಉಳಿದ ಸ್ಮಾರ್ಟ್ ಸಿಟಿ ಯೋಜನೆಗಳನ್ನು 2022ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಆಮೆಗತಿಯಲ್ಲಿ ಕೆಲಸ ಸಾಗುತ್ತಿದ್ದು, ಸಿಎಂ ನೀಡಿದ ಗಡುವಿನಲ್ಲಿ ಯೋಜನೆಗಳು ಪೂರ್ಣಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.
435 ಕೋಟಿ ರೂಪಾಯಿ ವೆಚ್ಚ: ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆ ಸಿದ್ಧಪಡಿಸಿರುವ ಯೋಜನೆಯಲ್ಲಿ ಒಟ್ಟು 29.49 ಕಿ.ಮೀ. ಉದ್ದದ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಉನ್ನತೀಕರಿಸಲಾಗುತ್ತಿದೆ. ಅದಕ್ಕಾಗಿ 434.89 ಕೋಟಿ ರೂ. ವ್ಯಯಿಸಲಾಗುತ್ತಿದೆ. ಮೊದಲ ಹಂತದಲ್ಲಿ 243.75 ಕೊಟಿ ರೂ. ವೆಚ್ಚದಲ್ಲಿ 16.89 ಕಿ.ಮೀ. ಉದ್ದದ 20 ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಪೈಕಿ 7 ರಸ್ತೆಗಳು ಪೂರ್ಣಗೊಂಡಿವೆ. ಇನ್ನು 2ನೇ ಹಂತದಲ್ಲಿ 12.6 ಕಿ.ಮೀ. ಉದ್ದದ 16 ರಸ್ತೆಗಳನ್ನು 191.13 ಕೋಟಿ ರೂ. ವ್ಯಯಿಸಿ ನಿರ್ವಿುಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಮುಕ್ತಾಯಗೊಂಡ ಕಾಮಗಾರಿಗಳು: 26.59 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿದ್ದ ಮಗರತ್ ರಸ್ತೆ 0.46 ಕಿ.ಮೀ, ಕಾನ್ವೆಂಟ್ ರಸ್ತೆ 0.42 ಕಿಮೀ, ಹೇಯ್್ಸ ರಸ್ತೆ 0.31 ಕಿಮೀ, ವುಡ್ ಸ್ಟ್ರೀಟ್ 0.28 ಕಿಮೀ, ಕಾಸ್ಟಲ್ ರಸ್ತೆ 0.38 ಕಿಮೀ, ಟಾಟಾ ಲೇನ್ 0.31 ಕಿಮೀ ರಸ್ತೆಯ ಕಾಮಗಾರಿಗಳು ಹಾಗೂ ರಾಜರಾಮ್ ಮೋಹನರಾಯ್ ರಸ್ತೆ 1 ಕಿಮೀ ಸೇರಿ ಒಟ್ಟು 7 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿವೆ.