ವಿಜಯವಾಣಿ ಸುದ್ದಿಜಾಲ ಕೋಟ ಕೋಟ ಗ್ರಾಮ ಪಂಚಾಯಿತಿ ಎದುರು ಇರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕು. ರಾಷ್ಟ್ರೀಯ ಹೆದ್ದಾರಿ ಸಹಿತ ವಿವಿಧೆಡೆ ವಿದ್ಯುತ್ ಕಂಬಗಳಲ್ಲಿ ಜೋತಾಡುತ್ತಿರುವ ಖಾಸಗಿ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದು ಕೋಟ ಪಂಚಾಯಿತಿ ಸದಸ್ಯ ಭುಜಂಗ ಗುರಿಕಾರ ಒತ್ತಾಯಿಸಿದರು. ಕೋಟ ಉಪವಿಭಾಗ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದರು. ಐರೋಡಿ ಭಾಗದ ಕೃಷಿ ಭೂಮಿಯಲ್ಲಿ ಕೆಳಮಟ್ಟದಲ್ಲಿ ನೇತಾಡುತ್ತಿರುವ ವಿದ್ಯುತ್ ತಂತಿಗಳ ಕುರಿತು ಸುರೇಶ್ ಕುಂದರ್ ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆದರು. ಪಾಂಡೇಶ್ವರ ವ್ಯಾಪ್ತಿಯಲ್ಲಿ ಮೂರು ಹೆಚ್ಚುವರಿ ಟಿಸಿ ಅಳವಡಿಸುವ ಕುರಿತು ಪಾಂಡೇಶ್ವರ ಪಂಚಾಯಿತಿ ಸದಸ್ಯ ಪ್ರತಾಪ್ ಶೆಟ್ಟಿ ಪ್ರಸ್ತಾಪಿಸಿದರು. ಈ ಕುರಿತು ಕಾರ್ಯ ಪ್ರಗತಿಯಲ್ಲಿರುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಬಿಲ್ ಸಮಸ್ಯೆ ನಿವಾರಣೆ: ಪಂಚಾಯಿತಿ ವತಿಯಿಂದ ದಾರಿದೀಪ ಅಳವಡಿಕೆಗೆ ಪಂಚಾಯಿತಿ ಕ್ರಿಯಾ ಯೋಜನೆ, ಕಾಮಗಾರಿಗಳ ಬಿಲ್ ಪಾವತಿಗೆ ಜಿಲ್ಲಾಮಟ್ಟದ ಕೇಂದ್ರಗಳಲ್ಲೇ ಅವಕಾಶ ನೀಡಲು ಕ್ರಮವಹಿಸಬೇಕು ಎಂದು ರವೀಂದ್ರ ತಿಂಗಳಾಯ ಒತ್ತಾಯಿಸಿದರು. ಕೋಟತಟ್ಟು ಪಂಚಾಯಿತಿ ಸದಸ್ಯೆ ವಿದ್ಯಾ ಸಾಲಿಯಾನ್, ಕೋಟತಟ್ಟು ಪಡುಕರೆ ಭಾಗದಲ್ಲಿ ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಈ ಕುರಿತು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು. ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಅವರ ಕಾರ್ಯವೈಖರಿಗೆ ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಮೆಚ್ಚುಗೆ ವ್ಯಕ್ತಪಡಿಸಿದರು.ಮೆಸ್ಕಾಂ ಉಡುಪಿ ಅಧೀಕ್ಷಕ ದಿನೇಶ್ ಉಪಾಧ್ಯಾ ಅಧ್ಯಕ್ಷತೆ ವಹಿಸಿದ್ದರು. ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ, ಸಹಾಯಕ ಇಂಜಿನಿಯರ್ (ತಾಂತ್ರಿಕ) ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ, ಕೋಟ ಉಪವಿಭಾಗದ ಲೆಕ್ಕಾಧಿಕಾರಿ ಕೆ.ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡವೊಂದು ಸಿಆರ್‌ಜಡ್ ವ್ಯಾಪ್ತಿಯಲಿದ್ದರೂ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಿದ ಬಗ್ಗೆ ಸಾಲಿಗ್ರಾಮದ ಸಾವಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಪ್ರಶ್ನಿಸಿದರು. ಸ್ಥಳೀಯಾಡಳಿತ ನೀಡಿದ ನಿರಾಕ್ಷೇಪಣಾ ಪತ್ರದ ಆಧಾರದಲ್ಲಿ ಇಲಾಖೆ ವತಿಯಿಂದ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಉಡುಪಿ ಅಧೀಕ್ಷಕ ದಿನೇಶ್ ಉಪಾಧ್ಯ ಉತ್ತರಿಸಿದರು.