ಕೊರಗರು ಸಮಾಜದ ಮುಖ್ಯವಾಹಿನಿಗೆ ಬರಬೇಕು

hbr (4)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ 18ನೇ ವರ್ಷದ ಭೂಮಿ ಹಬ್ಬ ಹಾಗೂ ಅಭಿವೃದ್ಧಿ ವಿಚಾರ ಸಂಕಿರಣ ಸೋಮವಾರ ಹೆಬ್ರಿ ಬಡಾಗುಡ್ಡೆಯ ಕೊರಗ ಸಭಾಭವನದಲ್ಲಿ ನಡೆಯಿತು.

ಐಟಿಡಿಪಿ ಇಲಾಖೆ ಉಡುಪಿಯ ಯೋಜನಾ ಸಮನ್ವಯ ಅಧಿಕಾರಿ, ಎಂ.ನಾರಾಯಣ ಸ್ವಾಮಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಶಿಕ್ಷಣ ವಂಚಿತರಾಗದಂತೆ ಸಂಘಟನೆಯ ಮೂಲಕ ನೋಡಿಕೊಳ್ಳಬೇಕು. ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುನ್ನೆಲೆಗೆ ತಾವೆಲ್ಲರೂ ಬರಬೇಕು. ದುಶ್ಚಟಗಳಿಂದ ಅನೇಕರು ಭಾದಿತರಾಗಿ ಕುಟುಂಬಕ್ಕೆ ಹೊರೆಯಾಗಿದ್ದಾರೆ, ಅಂತವರನ್ನು ಸಂಘಟನೆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.

ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷೆ ಸುಶೀಲಾ ನಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದ ವತಿಯಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಆಗಬೇಕು. ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡೋಣ. ಸರ್ಕಾರದಿಂದ ಸಿಗುವ ಸವಲತ್ತು ವಿನಿಯೋಗ ಆಗಲಿ. ಹೋರಾಟದ ಫಲವಾಗಿ ಇಂದು ಕನಿಷ್ಠ ಭೂಮಿ ನಮಗೆ ಸಿಕ್ಕಿದೆ ಎಂದರು.

ಹೆಬ್ರಿ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಬಡಾಗುಡ್ಡೆ ಕೊರಗ ಸಭಾಭವನಕ್ಕೆ ಸಾಗಿದ ಜಾಥಾವನ್ನು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ ಉದ್ಘಾಟಿಸಿದರು. ಧ್ವಜಾರೋಹಣವನ್ನು ಸಮುದಾಯದ ಮುಖಂಡ ಬೊಗ್ರ ಕೊರಗ ಮಾಡಿದರು.

ಸಾಂಸ್ಕೃತಿಕ ಅಭಿವ್ಯಕ್ತಿ, ಡೋಲು ವಾದನ, ಡೋಲು ಕುಣಿತ, ಹಾಡು ಪ್ರಹಸನ ನೃತ್ಯ ನಡೆಯಿತು. ಜಾಥಾದಲ್ಲಿ ಕೊರಗ ಸಮುದಾಯದ ವಿವಿಧ ಕಲಾತಂಡಗಳಿಂದ ವಿಶೇಷ ಆಕರ್ಷಣೆಯ ಡೋಲು, ಚೆಂಡೆ, ಕೊಳಲು ವಾದನ ಹಾಗೂ ಡೋಲು ಕುಣಿತ ಗಮನ ಸೆಳೆದವು.

ಪ್ರಮುಖರಾದ ಉಷಾ, ಅಮ್ಮಣ್ಣಿ ಅಬ್ಲಿಕಟ್ಟೆ, ಕೆ.ಪುತ್ರನ್ ಹೆಬ್ರಿ ಇದ್ದರು. ಸುಪ್ರಿಯಾ ಕಿನ್ನಿಗೋಳಿ ವಂದಿಸಿದರು. ವಿಮಲಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net