'ಜಂಗಮ' ಮಠದಲ್ಲಿ ಗಣೇಶ ಕಲಾವಿದರ 'ಸಂಗಮ'

Sangama Lead
Published on

ವಿವಿಧ ರೂಪದಲ್ಲಿ ಮೈದಳೆದ ಗಜಾನನ

ಹಳೆಯ ಕಲಾ ವಿದ್ಯಾರ್ಥಿಗಳಿಂದ ಚಿತ್ರ ಪ್ರದರ್ಶನ

ಪ್ರಶಾಂತ ಭಾಗ್ವತ ಉಡುಪಿ

ಸ್ನೇಹ ಅಥವಾ ಸ್ನೇಹಿತರೆಂದರೆ ಎಂದೂ ಮರೆಯಾಲಾಗದ ಬಾಂಧವ್ಯ. ನಿತ್ಯವೂ ನವನವೀನ. ಒಟ್ಟಿಗೇ ಐದು ವರ್ಷ ಕಲಿತು ಪರವೂರುಗಳಲ್ಲಿದ್ದ ವಿವಿಧ ವೃತ್ತಿ ನಿರತ ಚಿತ್ರಕಲಾ ಸ್ನೇಹಿತರು 18 ವರ್ಷದ ಬಳಿಕ ಮತ್ತದೇ ಶಾಲೆಯಲ್ಲಿ ಗಣೇಶನಿಗಾಗಿ ಬೆರೆತಿದ್ದಾರೆ.

ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರದ 2002-2007ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಕಲಾ ಶಾಲೆಯ ವಿಭೂತಿ ಆರ್ಟ್​ ಗ್ಯಾಲರಿಯಲ್ಲಿ ಸಂಗಮಗೊಂಡಿದ್ದಾರೆ. ಚೌತಿ ಹಬ್ಬದ ನಿಮಿತ್ತ ವಿವಿಧ ಸ್ವರೂಪೀ ಗಣೇಶನನ್ನು ಚಿತ್ರಿಸಿ, ಸಮೂಹ ಕಲಾಪ್ರದರ್ಶನ ಏರ್ಪಡಿಸಿದ್ದಾರೆ.

ಸವಿ ಸವಿ ನೆನಪು

ಪೂರ್ಣ ಪ್ರಮಾಣದ ಕಲಾಕಾರರಾಗಿ ವಿವಿಧ ಮಾಧ್ಯಮ, ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 13 ಸ್ನೇಹಿತರು ಕಲಿತ ಶಾಲೆಯಲ್ಲಿ ಹಿಂದಿನ ಸವಿಸವಿ ನೆನಪು ಮೆಲುಕು ಹಾಕಿದ್ದಾರೆ. ಬಗೆಬಗೆಯ ವಿನಾಯಕನನ್ನು ಚಿತ್ರಿಸಿ, ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನೂ ಕಲ್ಪಿಸಿದ್ದಾರೆ.

ಸ್ನೇಹಿತರ ಕಲರವ

8
7
ಕಲಾವಿದರಾದ ಅನ್ನಪೂರ್ಣಾ ಕಾಮತ, ಡಾ.ಜನಾರ್ದನ ರಾವ್​ ಹಾವಂಜೆ, ಕಾಂತಿ ಪ್ರಭು, ಪ್ರಶಾಂತ ಕೋಟ, ಪ್ರವೀಣ ಮಲ್ಲಾರ, ಪುರಂಧರ ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್​, ಶ್ರೀನಿವಾಸ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜಕುಮಾರ್​, ವಿದ್ಯಾ ಎಲ್ಲೂರು ಹಾಗೂ ಯಶೋದಾ ಸನಿಲ್​ ಸೇರಿ ಒಟ್ಟು 13 ಕಲಾವಿದರು ಗಣೇಶನ ವಿವಿಧ ಸ್ವರೂಪ ಚಿತ್ರಿಸಿದ್ದು, ವೀಕ್ಷಕ ವಿವರಣೆಯನ್ನೂ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿತ್ತಾರೆ ಕಲಾ ಶಾಲೆಯ ಡಾ.ನಿರಂಜನ ಯು.ಸಿ.

ಕಲಾವಿದರಿಂದ ಸಂವಾದ

9
ಸಂಜೆ 4 ಗಂಟೆಗೆ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ. ಚಿತ್ರ ವೀಕ್ಷಣೆಗೆ ಬರುವವರಿಗೆ ಕಲೆಯ ಹಾಗೂ ಚಿತ್ರದಲ್ಲಿರುವ ಮಹತ್ವದ ಕುರಿತು ವಿವರಿಸುತ್ತಾರೆ. ಕಾವಿ ಕಲೆಯ ಪುನರುಜ್ಜೀವನದ ಡಾಕ್ಯುಮೆಂಟರಿ ಹಾಗೂ ಸಂವಾದ, ಕಿರುಚಿತ್ರ ಪ್ರದರ್ಶನ, ಕಲೆ ಹಾಗೂ ಪ್ರಕೃತಿಯೊಂದಿಗಿನ ಅನುಭವ ಹಂಚಿಕೊಳ್ಳುತ್ತಾರೆ. ಆ.31ರಂದು ಸಂಜೆ 4 ಗಂಟೆಗೆ ಮಕ್ಕಳಿಗಾಗಿ ಕರಕುಶಲ ಕಲೆಯ ನಿರ್ಮಾಣ ಪ್ರಕ್ರಿಯೆಯ ಪ್ರದರ್ಶನವನ್ನೂ ಆಯೋಜಿಸಿದ್ದಾರೆ.

ಆಗಸ್ಟ್​ 31ರ ವರೆಗೆ ಚಿತ್ರ ಪ್ರದರ್ಶನ

1
2
ಗಣೇಶ ಚಿತ್ರ ಪ್ರದರ್ಶನದಲ್ಲಿ 30ಕ್ಕೂ ಅಧಿಕ ಬಗೆಯ ಗಣೇಶ ಹಾಗೂ ಪರಿಸರ ಪೂರಕ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಕಾವಿ ಕಲೆಯಲ್ಲಿ ಸಿಂಹ ಗಣಪತಿ, ಯಕ್ಷಗಾನ ಗಣೇಶ, ಎಕ್ರಾಲಿಕ್​ ಪೇಂಟಿಂಗ್ಸ್​ನಲ್ಲಿ ದಿ ವೇವ್ಸ್​, ರಿಲಾಕ್ಸಿಂಗ್​ ಗಣೇಶ, ಮಂಗಳಮೂರ್ತಿ, ಗಜಮುಖ, ಬಾಲ ಗಣೇಶ, ದಿ ಕಿಂಗ್​, ವೃತ್ತದೊಳಗಿನ 'ಜಿ' ಗಣೇಶ, ಸಹಸ್ರಾರ ಚಿತ್ರಗಳಿವೆ. ಆಯಿಲ್​ ಪೇಂಟಿಂಗ್​ನಲ್ಲಿ ಬಾಲ ಗಣೇಶ, ಕ್ಲೇ (3ಡಿ ಐಡಾಲ್​) ಗಣೇಶ, ಗ್ರಾಫಿಕ್​ ಡಿಸೈನ್​ನಲ್ಲಿ ಮೂಲ ಪ್ರಭಾ ಯಂತ್ರ ಹಾಗೂ ಬಟ್ಟೆ, ರಟ್ಟು, ಪೇಪರ್​ ಇತ್ಯಾದಿಗಳಿಂದ ರಚಿಸಿದ 'ಮಿಕ್ಸಡ್​ ಮೀಡಿಯಾ' ಗಣೇಶನ ಚಿತ್ರಗಳು ಗಮನ ಸೆಳೆಯುತ್ತಿವೆ. ಆ.31ರ ವರೆಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ರ ವರಗೆ ಪ್ರದರ್ಶನ ಇರಲಿದೆ.

ಉಡುಪಿಯ ಚಿತ್ರಕಲಾ ಮಂದಿರದಲ್ಲಿ ನಾವು 15 ವಿದ್ಯಾರ್ಥಿಗಳು 5 ವರ್ಷ ಕಲಾ ತರಬೇತಿ ಪಡೆದಿದ್ದೆವು. ಬೇರೆ ಬೇರೆ ಕಡೆಯಿದ್ದ 13 ವಿದ್ಯಾರ್ಥಿಗಳು ಗಣೇಶನ ಹಬ್ಬದ ಸಂದರ್ಭದಲ್ಲಿ ಸೇರಿದ್ದೇವೆ. ಕಲಾಭೀಷ್ಮ ದಿ. ಕೆ.ಎಲ್​. ಭಟ್​ ಸ್ಮರಣೆಯೊಂದಿಗೆ ನಮಗೆ ಕಲಾವಿದ್ಯೆ ನೀಡಿದ ಗುರುಗಳನ್ನು ಗೌರವಿಸಿದ್ದೇವೆ. ಕಲೆಯ ಪ್ರದರ್ಶನದ ಮೂಲಕ ಗುರುಗಳಿಗೆ ನಮನ ಸಲ್ಲಿಸಿದ್ದೇವೆ. | ಡಾ. ಜನಾರ್ದನ ರಾವ್​ ಹಾವಂಜೆ. ಕಾವಿ ಕಲಾವಿದ ಮಕ್ಕಳಿಗೆ ಗಣೇಶನ ಪುರಾಣೇತಿಹಾಸ ಪರಿಚಯಿಸುವುದೇ ಈ ಕಲಾ ಪ್ರದರ್ಶನದ ಪ್ರಮುಖ ಉದ್ದೇಶ. ಇಂದಿನ ಮಕ್ಕಳಿಗೆ ಪಾಲಕರೂ ಸಹ ಮೊಬೈಲ್​ನಲ್ಲಿ ಆಟ ಆಡುವುದನ್ನೇ ರೂಢಿಸಿದ್ದಾರೆ. ಅವರಿಗೆ ನಮ್ಮ ಹಬ್ಬ-ಸಂಪ್ರದಾಯದ ಅರಿವು ಮೂಡಿಸಿ ಇಂತಹ ಕಲೆಗಳತ್ತ ಆಸಕ್ತಿ ಮೂಡಿಸುವುದು ನಮ್ಮ ಆಶಯವಾಗಿದೆ. | ಯಶೋದಾ ಎಸ್​. ಸನಿಲ್​. ಚಿತ್ರ ಕಲಾವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net