ಜಿಲ್ಲೆ

ಇಲ್ಲಿ ಇಂದು ಮತ್ತೆ ಭೂಕಂಪ!; ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಕಂಗೆಟ್ಟಿರುವ ಜನತೆ...

Webdesk - Ravikanth

ವಿಜಯಪುರ: ಎಂಥ ಧೈರ್ಯದ ಮನುಷ್ಯನೇ ಆದರೂ ನಿಂತ ನೆಲವೇ ನಡುಗಿದಾಗ ಕುಸಿದಾಗ ಒಮ್ಮೆ ಎದೆ ಧಸಕ್​ ಎಂದು ಬಿಡುತ್ತದೆ. ಇಲ್ಲೊಂದು ಕಡೆ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಆತಂಕಗೊಂಡಿರುವ ಜನತೆ ಅಂಥದ್ದೇ ಒಂದು ಭಯದಿಂದ ಕಂಗೆಟ್ಟಿದ್ದಾರೆ.

ನಿನ್ನೆಯಷ್ಟೇ ಭೂಕಂಪನ ಸಂಭವಿಸಿದ್ದ ವಿಜಯಪುರ ಜಿಲ್ಲೆಯಲ್ಲಿ ಇಂದು ಕೂಡ ಭೂಮಿ ಕಂಪಿಸಿದೆ. ಅದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಕೂಡ ಖಚಿತ ಪಡಿಸಿದೆ. ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8.31ಕ್ಕೆ ಲಘು ಭೂಕಂಪನ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 2.0 ಭೂಕಂಪನ ದಾಖಲಾಗಿದೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಹತ್ತು ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಘೊಣಸಗಿ, ಮಲಕನದೇವರಹಟ್ಟಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ ಭಾಗದಲ್ಲಿ ಇಂದು 8.30 ರಿಂದ 8.31 ನಿಮಿಷಕ್ಕೆ ಭೂಮಿ ಕಂಪಿಸಿದೆ.

ನಿನ್ನೆ ಮಧ್ಯಾಹ್ನ ಬಸವನಬಾಗೇವಾಡಿ ತಾಲೂಕಿನ ಮಸೂತಿಯಲ್ಲಿ, ಸಂಜೆ ವಿಜಯಪುರದಲ್ಲಿ ಭೂಕಂಪನವಾಗಿದ್ದು, ಜಿಲ್ಲೆಯ ವಿವಿಧೆಡೆ ಎರಡು ಸಲ ಭೂಮಿ ಕಂಪಿಸಿದೆ. ಸೆಪ್ಟೆಂಬರ್ 4ರಂದು ರಾತ್ರಿ 3.9ನಷ್ಟು ತೀವ್ರತೆಯ ಭೂಕಂಪ ಈ ಜಿಲ್ಲೆಯಲ್ಲಿ ಆಗಿತ್ತು. ಇಂದು ಮತ್ತೆ ಭೂಕಂಪ ಆಗಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.