ಜಿಲ್ಲೆ

ಭಕ್ತರ ಭಕ್ತಿಯಲ್ಲಿ ಭಗವಂತನಿದ್ದಾನೆ : ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರಸ್ತುತ ದಿನಗಳಲ್ಲಿ ಭಾರಿ ವೈಭವದಿಂದ ಬ್ರಹ್ಮಕಲಶ, ವೈಭವದ ಧರ್ಮಚಾವಡಿ ನಡೆಯುತ್ತಿದೆ, ಆದರೆ ಭಗವಂತ ದೇವಸ್ಥಾನದೊಳಗಿನ ಗರ್ಭಗುಡಿ, ಮೂರ್ತಿ, ಚಾವಡಿಯಲ್ಲಿಲ್ಲ. ಭಕ್ತನ ಭಕ್ತಿಯೊಳಗಿದ್ದಾನೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಣಾಜೆ ಗ್ರಾಮದ ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸು ಮಾಡ ಕ್ಷೇತ್ರದಲ್ಲಿ 490 ವರ್ಷಗಳ ಬಳಿಕ ನಡೆಯುತ್ತಿರುವ ಧರ್ಮ ನಡಾವಳಿ ಮಹೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಪರಿಷತ್ ರಾಜ್ಯ ಸದಸ್ಯ ರವಿಶಂಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತಬೈಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ‘ಪಟ್ಟೋರಿಯ ದೈವಂಗಳ್’ ಕೃತಿ ಬಿಡುಗಡೆಗೊಳಿಸಲಾಯಿತು.

ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಮದಾಸ ಆಳ್ವ ಮಂಜನಾಡಿ, ದೈವಜ್ಞ ಶಶಿ ಪಂಡಿತ್, ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಧಾರ್ಮಿಕ ಮುಖಂಡ ರಾಜೇಶ್ ಶೆಟ್ಟಿ ಪಜೀರುಗುತ್ತು, ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಆಳ್ವ, ಅಸೈಗೋಳಿ ಅಯ್ಯಪ್ಪ ಸ್ವಾಮಿ ಮಂದಿರ ಟ್ರಸ್ಟಿ ಚಂದ್ರಶೇಖರ ಮಂಟಮೆ, ಧರ್ಮ ನಡಾವಳಿ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಭಟ್ ಕೊಣಾಜೆಬೀಡು, ಪಟ್ಟೋರಿ ದೈವ ಗಡಿಪ್ರಧಾನ ತಿಮ್ಮಯ್ಯ ಕಾಜವ ಯಾನೆ ದಿವಾಕರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಧರ್ಮ ನಡಾವಳಿ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಸ್ವಾಗತಿಸಿದರು. ಪ್ರಧನಾ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ನಿಶಾ ರವಿ ಕಾನ ವಂದಿಸಿದರು. ರವಿ ಪಟ್ಟೋರಿ ಹಾಗೂ ಮೋಹನ್ ಶಿರ್ಲಾಲ್ ನಿರೂಪಿಸಿದರು.