ಕಡಲ್ಕೊರೆತಕ್ಕೆ ಕಾಡು ನಿರ್ಮಾಣವೇ ಪರಿಹಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪರಿಸರ ಸಂರಕ್ಷಕ ಡಾ.ಆರ್.ಕೆ.ನಾಯರ್ ಅಭಿಮತ

blank

 

ಮಂಗಳೂರು: ಕರಾವಳಿಯ ಪ್ರಮುಖ ಸಮಸ್ಯೆಯಾಗಿರುವ ಕಡಲ್ಕೊರೆತ ತಡೆಗೆ ಸಮುದ್ರದ ಬದಿ ಕಾಡು ನಿರ್ಮಾಣ ಮಾಡುವುದರಿಂದ ಪರಿಹಾರ ಸಾಧ್ಯ ಎಂದು ಮೂಲತಃ ಸುಳ್ಯದವರಾದ, ಗುಜರಾತ್‌ನ ಸ್ಮತಿ ವನದ ರುವಾರಿ, ಉದ್ಯಮಿ ಡಾ.ರಾಧಾಕೃಷ್ಣ ನಾಯರ್ ಹೇಳಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪ್ರೆಸ್‌ಕ್ಲಬ್ ಗೌರವ ಸ್ವೀಕರಿಸಿ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅನುಭವಗಳನ್ನು ತೆರೆದಿಟ್ಟರು.
ಕೊರೆತ ತಡೆಗೆ ಹಾಕಿದ ಕಲ್ಲು, ಬಂಡೆಗಳು ಕಡಲಿನ ಒಡಲು ಸೇರುತ್ತವೆಯೇ ಹೊರತು, ಪರಿಹಾರ ಸಾಧ್ಯವಿಲ್ಲ. ಪ್ರಕೃತಿಯ ವಿರುದ್ಧ ಮನುಷ್ಯ ಹೋರಾಟ ಮಾಡಲು ಸಾಧ್ಯವಿಲ್ಲ. ಪೂರಕ ಚಟುವಟಿಕೆ ಕೈಗೊಂಡಾಗ ಪ್ರಕೃತಿ ಸ್ಪಂದಿಸುತ್ತದೆ ಎಂದರು.

ದೇಶದ 12 ರಾಜ್ಯಗಳಲ್ಲಿ 121 ಮಿಯಾವಾಕಿ ಕಾಡು ನಿರ್ಮಾಣ ಮಾಡಲಾಗಿದೆ. 32 ಲಕ್ಷಕ್ಕಿಂತಲೂ ಅಧಿಕ ಗಿಡಗಳನ್ನು ನೆಡಲಾಗಿದೆ. ಮರಳಿನಲ್ಲೂ ಗಿಡ ನೆಟ್ಟು ಕಾಡು ಬೆಳೆಸಿದ್ದೇವೆ. ರಾಜಸ್ಥಾನದಲ್ಲಿ ಮರಳುಗಾಡಿನಲ್ಲಿ ಗಿಡ ಬೆಳೆಸಲು ಸಾಧ್ಯವಿಲ್ಲ ಎಂದು ಅಲ್ಲಿನ ಜನ ಸವಾಲು ಹಾಕಿದ್ದರು. ಆದರೆ ಅಲ್ಲಿ ಕಾಡು ಬೆಳೆಸಿ ತೋರಿಸಿದ್ದೇವೆ. ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಿದ ಸ್ಮತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇಲ್ಲಿ 5.25 ಲಕ್ಷ ಗಿಡಗಳನ್ನು ನೆಡಲಾಗಿದೆ. ಎರಡನೇ ಹಂತದಲ್ಲಿ 12 ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರಾಕೃತಿಕವಾಗಿ ಹಲವಾರು ಬಗೆಯ ಮೀನುಗಳು, ಪ್ರಾಣಿ, ಪಕ್ಷಿಗಳು ಈ ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುತ್ತಿವೆ ಎಂದರು.

ಪಿಯುಸಿ ಫೇಲ್ ಸಾಧನೆಗೆ ಪ್ರೇರಣೆ: ಕೇರಳದಿಂದ ಬಂದು ಸುಳ್ಯದ ಜಾಲ್ಸೂರು ಬಳಿ ಕಾಡಿನ ಬದಿ ವಾಸ ಮಾಡಿಕೊಂಡಿದ್ದ ನಮ್ಮ ಕುಟುಂಬದ ಜೀವನೋಪಾಯ ಕೂಲಿ ಕೆಲಸವಾಗಿತ್ತು. ಮೂಲ ಬದುಕನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಎಲ್ಲೇ ಹೋದರೂ ಹಾಳೆಯ ಮುಟ್ಟಾಳೆ ಧರಿಸುತ್ತಿದ್ದೇನೆ. ಪಿಯುಸಿ ಫೇಲಾದ ಬಳಿಕ 1989ರಲ್ಲಿ ಉದ್ಯೋಗ ಅರಸಿ ಸ್ನೇಹಿತನೊಂದಿಗೆ ಮುಂಬೈಗೆ ತೆರಳಿದ್ದೆ. ಅಲ್ಲಿ ಮೆಡಿಕಲ್, ಹೋಟೆಲ್‌ನಲ್ಲಿ ಒಂದಷ್ಟು ಕಾಲ ಕೆಲಸ ಮಾಡಿದೆ. ನಂತರ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅಲ್ಲಿ ಉತ್ತಮ ಹುದ್ದೆಗೇರಿ ಗುಜರಾತ್‌ಗೆ ತೆರಳಿದೆ. ಅಲ್ಲಿ ಸ್ವಲ್ಪ ಕಾಲದ ಬಳಿಕ ಸ್ವಂತ ಗಾರ್ಮೆಂಟ್ಸ್ ಉದ್ಯಮ ತೆರೆದು ಮುನ್ನಡೆಸಿಕೊಂಡು ಬರುತ್ತಿದ್ದೇನೆ. ಪತ್ನಿ, ಪುತ್ರ, ಸೊಸೆ ಈ ಉದ್ಯಮವನ್ನು ವಿಸ್ತರಿಸಿಕೊಂಡು ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ನಾನು ಕಾಡು ಬೆಳೆಸುವುದರಲ್ಲೇ ತೊಡಗಿದ್ದೇನೆ ಎಂದು ಬದುಕಿನ ವೃತ್ತಾಂತ ಬಿಚ್ಚಿಟ್ಟರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

 
ಮರ, ಪಕ್ಷಿಗಳೊಂದಿಗೆ ಮಾತನಾಡಿ
ಪ್ರಕೃತಿಯೊಂದಿಗೆ ನಾವು ಮಾತನಾಡಬೇಕು. ಮರ ಮಾತನಾಡುವುದು ನಮಗೆ ಕೇಳಿಸದಿರಬಹುದು. ಆದರೆ ನಮ್ಮ ಮಾತನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತದೆ. ಹೂ, ಹಣ್ಣು ನೀಡದ ಮರದ ಬಳಿ ಮುಂದಿನ ವರ್ಷ ಫಲ ನೀಡದಿದ್ದರೆ ಬೇರೆ ಗಿಡ ತಂದು ಇಲ್ಲಿಯೇ ನೆಡುತ್ತೇನೆ ಎಂದರೆ, ಮರುವರ್ಷ ಬೇಕಾದಷ್ಟು ಫಲ ನೀಡುತ್ತದೆ. ನಾನು ನಿರ್ಮಾಣ ಮಾಡಿದ ಮಿಯಾವಾಕಿ ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಪಕ್ಷಿಗಳು ಹಾರಿ ಬಂದು ಚಿಲಿಪಿಲಿಗೈಯ್ಯುತ್ತಾ ಸ್ವಾಗತಿಸುತ್ತವೆ. ಅವುಗಳ ಜತೆ ಮಾತನಾಡಿದ ಬಳಿಕವೇ ಅಲ್ಲಿಂದ ತೆರಳುತ್ತವೆ ಎಂದು ಪರಿಸರದ ಜತೆಗಿನ ಬಾಂಧವ್ಯವವನ್ನು ಡಾ.ಆರ್.ಕೆ.ನಾಯರ್ ವಿವರಿಸಿದರು.

 

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…