ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ರೆಸಾರ್ಟ್ವೊಂದರಲ್ಲಿ ಗಣಿ ಉದ್ಯಮಿಗಳು, ರಾಜಕಾರಣಿಗಳ ಪುತ್ರರು ಸೇರಿದಂತೆ ಹಲವರು ಹೊರರಾಜ್ಯ ಹಾಗೂ ದೇಶಗಳಿಂದ ಯುವತಿಯರನ್ನು ಕರೆಸಿಕೊಂಡು ರೇವ್ ಪಾರ್ಟಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯದ ಸಾದಹಳ್ಳಿಯ ಜೆಡಿ ಗಾರ್ಡನ್ ರೆಸಾರ್ಟ್ನಲ್ಲಿ ಈ ರೇವ್ ಪಾರ್ಟಿ ನಡೆದಿದ್ದು, ಪೊಲೀಸರಿಂದ ದಾಳಿ ಕೂಡ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಅದನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಕೆಐಎಎಲ್ ವಿಮಾನನಿಲ್ದಾಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಈ ರೆಸಾರ್ಟ್ನಲ್ಲಿ ಸೆ.6 ರಂದು ರೇವ್ ಪಾರ್ಟಿ ನಡೆದಿದ್ದು, ಇದರಲ್ಲಿ ಹೊರರಾಜ್ಯದವರು ಮಾತ್ರವಲ್ಲದೆ, ಹೊರದೇಶದ ಯುವತಿಯರೂ ಪಾಲ್ಗೊಂಡಿದ್ದಾರೆ. ಈ ಪಾರ್ಟಿಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, 9 ಜನರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಬಳ್ಳಾರಿ ಮೂಲದ ಗಣಿ ಉದ್ಯಮಿಯ ಪುತ್ರ, ಪ್ರಭಾವಿ ರಾಜಕಾರಣಿಯ ಪುತ್ರ ಕೂಡ ಪಾರ್ಟಿಯಲ್ಲಿ ಇದ್ದರು ಎನ್ನಲಾಗಿದ್ದು, ಅವರನ್ನು ಬಚಾವ್ ಮಾಡುವ ಪ್ರಯತ್ನ ಪೊಲೀಸರಿಂದ ನಡೆದಿದೆಯಾ? ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.