ಕಡಬ: ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ ಸಮಾಜವನ್ನು ಕಟ್ಟುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆಯ ಉದ್ದೇಶವಿಟ್ಟುಕೊಳ್ಳದೆ ಸುಶಿಕ್ಷಿತ, ಸುಸಂಸ್ಕೃತ ಸಮಾಜ ನಿರ್ಮಾಣದ ಉದ್ದೇಶವಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ರಾಮಕುಂಜೇಶ್ವರ ಸಭಾಂಗಣದಲ್ಲಿ ಬುಧವಾರ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ವಿದ್ಯಾರ್ಥಿಗಳು ದಾರಿ ತಪ್ಪಬಾರದು. ಪಾಲಕರಿಗೆ ಎಂದಿಗೂ ನೋವು ತರುವ ಕೆಲಸ ಮಾಡಬಾರದು. ಡ್ರಗ್ಸ್, ಮಾದಕ ವ್ಯಸನಿಗಳಾಗಬಾರದು ಎಂದರು.
ಕನಕ ಗೌರವ ಪ್ರಶಸ್ತಿ ಪುರಸ್ಕೃತ ಡಾ.ವಸಂತ ಕುಮಾರ್ ತಾಳ್ತಜೆ, ಪ್ರಗತಿಪರ ಕೃಷಿಕ ಉದಯಶಂಕರ ಭಟ್ ಬಲ್ಲಾಳಿಕೆ, ಸಿಎ ಮಹೇಶ್‌ಕುಮಾರ್ ಬಿ, ಡಾ.ಪ್ರತ್ಯಕ್ಷ ಭೈರವ, ಸುದತ್ತ ಗೌತಮ್ ಶುಭಹಾರೈಸಿದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಸದಸ್ಯರಾದ ಲಕ್ಷ್ಮೀ ನಾರಾಯಣ ರಾವ್, ಮಾಧವ ಆಚಾರ್ಯ ಇಜ್ಜಾವು, ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್, ವಿದ್ಯಾರ್ಥಿ ಸಂಘದ ನಾಯಕರಾದ ಅನಿರುದ್ಧ್, ಪೃಥ್ವಿರಾಜ್ ಉಪಸ್ಥಿತರಿದ್ದರು.
ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಚಂದ್ರಶೇಖರ ಕೆ. ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸತೀಶ್ ಭಟ್ ವರದಿ ವಾಚಿಸಿದರು. ಉಪನ್ಯಾಸಕ ನವೀನ್ ಕೊರೆಯ ವಂದಿಸಿದರು. ಉಪನ್ಯಾಸಕ ಗುಡ್ಡಪ್ಪ ಬಲ್ಯ ನಿರೂಪಿಸಿದರು.
ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳು ಶೇ.99 ಅಂಕ ಪಡೆದವರನ್ನು ಮಾತ್ರ ದಾಖಲಾತಿ ಮಾಡಿಕೊಳ್ಳುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆ ವಿದ್ಯೆ ಬಯಸಿ ಬರುವ ಎಲ್ಲರನ್ನೂ ದಾಖಲಾತಿ ಮಾಡಿ ಅವರು ಉತ್ತಮ ಅಂಕಗಳಿಸುವುದರೊಂದಿಗೆ ಸತ್ಪ್ರಜೆಯನ್ನಾಗಿ ರೂಪಿಸುತ್ತಿವೆ. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿ ಪೇಜಾವರ ಮಠ
ಸಾಧಕರಿಗೆ ಗೌರವಾರ್ಪಣೆ
ಸಂಸ್ಥೆಯ ನಿವೃತ್ತ ಶಿಕ್ಷಕ ಮನಮೋಹನ್ ರೈ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರಿತಾ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ವಿಜಿತ್ ಶೆಟ್ಟಿ, ಎಸ್‌ಆರ್‌ಕೆ ಲ್ಯಾಡರ್ಸ್‌ನ ಕೇಶವ ಅಮೈ, ಆಲಂಕಾರು ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಸಾಧಕ ವಿದ್ಯಾರ್ಥಿಗಳನ್ನು, ಹಳೇ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.