ಜಿಲ್ಲೆ

ಮಳೆ ತಂದ ಸಂಕಷ್ಟ: ಭೂಮಿಯಲ್ಲೇ ಕೊಳೆಯುತ್ತಿದೆ ಈರುಳ್ಳಿ, ಬೆಳೆಗಾರ ಆತ್ಮಹತ್ಯೆ

arunakunigal

ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ.

ಅಂದುಕೊಂಡಂತೆ ಆಗಿದ್ದರೆ ಇನ್ನು ಹದಿನೈದು ದಿನದೊಳಗೆ ಈರುಳ್ಳಿ ಬೆಳೆಗಾರರ ಜೇಬಿಗೆ ಹಣ ಸೇರುತ್ತಿತ್ತು. ಆದರೆ, ವರುಣನ ಅವಕೃಪೆಯಿಂದಾಗಿ ಎಲ್ಲವೂ ಮಣ್ಣುಪಾಲಾಗಿದೆ. ಕಷ್ಟಪಟ್ಟು ಮೂರ್ನಾಲ್ಕು ತಿಂಗಳಿಂದ ಈರುಳ್ಳಿ ಫಸಲು ಕಾಯುತ್ತಿದ್ದವರ ಕಣ್ಣೆದುರಲ್ಲೇ ಬೆಳೆ ಕೊಳೆಯುತ್ತಿದ್ದು, ಬೇಸತ್ತ ಕೆಲ ರೈತರು ತಮ್ಮ ಕೈಯಾರ ತಾವೇ ಬೆಳೆ ನಾಶ ಮಾಡುತ್ತಿದ್ದಾರೆ. ಇನ್ನೂ ಹಲವರು ಕಸಕ್ಕೆ ಸುರಿಯುತ್ತಿದ್ದಾರೆ. ಮತ್ತೊಬ್ಬ ರೈತ ಸಾವಿನ ಕದ ತಟ್ಟಿದ್ದಾನೆ. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್​ ಪ್ರತಿಭಟನೆ

ಈರುಳ್ಳಿ-ಬೆಳ್ಳುಳ್ಳಿ ಬೆಲೆ ಹಾನಿಯಿಂದ ಕಂಗಾಲದ ಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಳ್ಳೀಪುರ ಗ್ರಾಮದ ರೈತ ಶ್ರೀನಿವಾಸ(45) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಕಾರ ಸಂಘ, ಬ್ಯಾಂಕ್ ಹಾಗೂ‌‌‌ ಚಿನ್ನಾಭರಣ ಗಿರವಿ ಇಟ್ಟು ಸಾಲ‌ ಪಡೆದಿದ್ದು. ಈರುಳ್ಳಿ-ಬೆಳ್ಳುಳ್ಳಿ ಬೆಳೆಯಿಂದ ಬಂದ ಲಾಭದಲ್ಲಿ ಸಾಲ ತೀರಿಸುವ ಯೋಜನೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಬೆಳೆ ನಾಶವಾಗಿದೆ.

ಇನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲೂ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿನ ಅಡರಗಟ್ಟಿ ಗ್ರಾಮದ ರೈತ ಮರಬಸಪ್ಪ ಯಲ್ಲಪ್ಪ ಚಿಕ್ಕಣ್ಣವರ ಬೆಳೆದಿದ್ದ ಈರುಳ್ಳಿ ಕಟಾವು ಹಂತಕ್ಕೆ ಬಂದಿತ್ತು. ಅತಿಯಾಗಿ ಸುರಿದ ಮಳೆಯಿಂದಾಗಿ ಭೂಮಿಯಲ್ಲೇ ಫಸಲು ಕೊಳೆಯುತ್ತಿದೆ. ಬೇಸತ್ತ ರೈತನು, ತಾನೇ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ಉಳುಮೆ ಮಾಡಿ ನಾಶ ಮಾಡಿದ್ದಾರೆ, ಈ ದೃಶ್ಯ ಮನಕಲಕುವಂತಿತ್ತು.

ಇನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆದಿರುವ ಈರುಳ್ಳಿ ಫಸಲು ಮಳೆಗೆ ಹಾನಿಯಾಗಿದೆ.