ಗುರುಪುರ: ಸತತ ಸುರಿಯುತ್ತಿರುವ ಧಾರಾಕಾರ ಮಳೆಗೆ ಚತುಷ್ಪಥ ಕಾಮಗಾರಿ ಮುಂದುವರಿದಿರುವ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಮತ್ತು ಗುರುಪುರ ಕೈಕಂಬದಲ್ಲಿ ರಸ್ತೆಯ ಅಲ್ಲಲ್ಲಿ ಕೆಸರು ನೀರು ಮಣ್ಣು ತುಂಬಿದ್ದರೆ, ಗುರುಪುರ ಬೆಳ್ಳಿಬೆಟ್ಟು ಪ್ರದೇಶದಲ್ಲಿ ಹೆದ್ದಾರಿ ನೀರು ಒಳವಾರ್ಗದ ಮೂಲಕ ತಗ್ಗುಪ್ರದೇಶಕ್ಕೆ ಹರಿದು ಕೃತಕ ನೆರೆ ಸೃಷ್ಟಿಯಾಗಿದೆ.
ಬೆಳ್ಳಿಬೆಟ್ಟಿನಲ್ಲಿ ಕೃತಕ ನೆರೆ!:
ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಬೆಳ್ಳಿಬೆಟ್ಟು ಪ್ರದೇಶದ ಬಹುಭಾಗ ಕೆಸರು ನೀರಿನಿಂದ ತುಂಬಿ ಹೋಗಿದ್ದು, ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಗುರುಪುರ ಕೈಕಂಬದ ಬಾಮಿ ಶಾಲೆಯ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಒಂದೆರಡು ಬೃಹತ್ ಮೋರಿ ಬಂದ್ ವಾಡಿರುವುದರಿಂದ ಗುಡ್ಡದ ನೀರು ನೇರವಾಗಿ ಹೆದ್ದಾರಿಯಿಂದ ಮೂಲಕ ಬೆಳ್ಳಿಬೆಟ್ಟು ರಸ್ತೆಯಲ್ಲಿ ಹರಿಯುತ್ತಿದೆ. ನೀರಿನಲ್ಲಿ ಕೊಳಚೆ ಹರಿದು, ತಗ್ಗುಪ್ರದೇಶದ (ಬೆಳ್ಳಿಬೆಟ್ಟು) ಬಾವಿಗಳಲ್ಲಿ ಕೆಸರು ನೀರು ತುಂಬಿದೆ. ಹೆದ್ದಾರಿಯಲ್ಲಿ ಭಾರೀ ಪ್ರವಾಣದ ಕೊಳಚೆ ತ್ಯಾಜ್ಯ ತುಂಬಿ ಹೋಗಿದೆ.
ಗುಡ್ಡದಂಚಿನಲ್ಲಿ ಕೊರೆತ
ಕಳೆದ 2 ದಿನಗಳಿಂದ ಹಗಲಲ್ಲೇ ಕತ್ತಲು ಆವರಿಸಿದ್ದು, ಕೆಸರು ನೀರು ತುಂಬಿರುವ ರಸ್ತೆ ಹೊಂಡಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಕೆತ್ತಿಕಲ್ ಪ್ರದೇಶದಲ್ಲಿ ಮತ್ತೆ ಕಿರು ಜಲಪಾತ ತೆರೆದುಕೊಂಡಿದೆ. ಇಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಂದ ಕೆಸರು ನೀರು ಎರಚುತ್ತಿದೆ. ಗುಡ್ಡಕ್ಕೆ ಸಾಯಿಲ್ ನೈಲಿಂಗ್ ತಂತ್ರಜ್ಞಾನ ಅಳವಡಿಸಲಾದ ಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಹೆದ್ದಾರಿ ಅಂಚಿನಲ್ಲಿ ಕೊರೆತ ಉಂಟಾಗಿದೆ.
ಗುಡ್ಡ ಕುಸಿಯದಂತೆ ಅತ್ಯಾಧುನಿಕ ತಂತ್ರಜ್ಞಾನದ ಸಿಮೆಂಟ್ ಪ್ಲಾಸ್ಟರ್ ಮತ್ತು ಗುಡ್ಡಕ್ಕೆ ಉಕ್ಕಿನ ಮೊಳೆ (ಸಾಯಿಲ್ ನೈಲಿಂಗ್) ಅಳವಡಿಸಲಾಗಿದೆ. ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಗುಡ್ಡ ಪ್ರದೇಶದಲ್ಲಿ ಈ ಹಿಂದೆ ಮಣ್ಣು ಕೊರೆದಿರುವುದರಿಂದ ಪ್ರಸಕ್ತ ರಕ್ಷಣಾ ವ್ಯವಸ್ಥೆ (ತಂತ್ರಜ್ಞಾನ) ಬಾಳಿಕೆ ಮೇಲೆ ಹೆಚ್ಚು ವಿಶ್ವಾಸ ಹರಿಸುವಂತಿಲ್ಲ. ಮಳೆ ನೀರಿನ ರಭಸಕ್ಕೆ ಹೆದ್ದಾರಿಯ ಅಂಚಿನ ಪ್ಲಾಸ್ಟರ್‌ಸಾಯಿಲ್ ನೈಲಿಂಗ್‌ಗೆ ಹಾನಿಯುಂಟಾಗಿದೆ. ಗುಡ್ಡದ ನೀರು ಹೆದ್ದಾರಿಯತ್ತ ಹರಿಯದಿರಲು ಸಾಯಿಲ್ ನೈಲಿಂಗ್ (ಮೊಳೆ ಕೊಳವೆ) ಅಳವಡಿಸಲಾಗಿದೆ. ಆದರೆ, ಹೆದ್ದಾರಿ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ಗುಡ್ಡದಿಂದ ಮಳೆ ನೀರು ಸಾಯಿಲ್ ನೈಲಿಂಗ್ ಪ್ಲಾಸ್ಟರ್‌ನ ಮೇಲಿಂದ ಹೆದ್ದಾರಿಯತ್ತ ಹರಿಯುತ್ತಿದೆ. ಅಕಾಲಿಕ ಮಳೆಗೆ ಹೀಗಾದರೆ, ಮುಂದೆ ಮಳೆಗಾಲದಲ್ಲಿ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾದಾಗ ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಯಕ್ಷಪ್ರಶ್ನೆಯಾಗಿದೆ. ಗುಡ್ಡದ ಮೇಲ್ಭಾಗದಿಂದ ಮಣ್ಣು ಕುಸಿತವಾದರೆ ದೇವರೇ ಗತಿ. ಬೇಸಗೆಯಲ್ಲಿ ಈ ವ್ಯವಸ್ಥೆ ನೋಡಲು ಚೆಂದವಾಗಿದ್ದರೂ, ಮುಂದಿನ ಮಳೆಗಾಲಕ್ಕೆ ಇದರ ವಾಸ್ತವ ಚಿತ್ರಣ ಬಯಲಾಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಕಸದಗುಡ್ಡೆಯಾದ ಮಠದಗುಡ್ಡೆ!
ಮೂಳೂರು ಗ್ರಾಮದ ಮಠದಗುಡ್ಡೆಯಿಂದ ಹೆದ್ದಾರಿ ಸಂಪರ್ಕದ ರಸ್ತೆ ತುಂಬೆಲ್ಲ ಜಲ್ಲಿ, ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯ ಸೊತ್ತು ತುಂಬಿ ಹೋಗಿದ್ದು, ರಸ್ತೆಯಲ್ಲಿ ವಾಹನ ಸಂಚಾರ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯ ಪಕ್ಕದಲ್ಲಿ ತುಂಬಿ ಹೋಗಿರುವ ರಾಶಿರಾಶಿ ತ್ಯಾಜ್ಯವು ಗುರುಪುರ ಜನವಸತಿ ಪ್ರದೇಶಗಳಿಗೆ ಹರಿದು ಬರುತ್ತಿವೆ. ಇನ್ನಾದರೂ ಗುರುಪುರ ಗ್ರಾಮ ಪಂಚಾಯಿತಿ ಆಡಳಿತ ಇತ್ತ ಸಕಾರಾತ್ಮಕ ದೃಷ್ಟಿ ಹರಿಸಬೇಕಿದೆ. ಇಲ್ಲವಾದಲ್ಲಿ ಮಠದಗುಡ್ಡೆ ಕಸದಗುಡ್ಡೆಯಾಗಿ ಪರಿವರ್ತನೆಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.