ರಾಯಚೂರು: ಬರದ ಆತಂಕದಲ್ಲಿದ್ದ ರೈತರಿಗೆ ಈ ವರ್ಷ ಅವದಿಗೂ ಮೊದಲೇ ತುಂಗಭದ್ರಾ ಜಲಾಶಯ ತುಂಬಿ ಸಂತಸ ತಂದಿತ್ತು ಆದರೆ ಇತ್ತೀಚೆಗೆ ಜಲಾಶಯದ 19ನೇ ಗೇಟ್‌ನ ಚೈನ್ ಕಟ್ ಆಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಡ್ಯಾಂನಲ್ಲಿದ್ದ ನೀರು ಖಾಲಿ ಆಗುತ್ತಿರುವುದರಿಂದ ರೈತರಿಗೆ ಆಘಾತವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.
ಇದನ್ನೂ ಓದಿ: ಟಿಬಿ ಡ್ಯಾಂಗೆ ಗವಿಶ್ರೀ ಭೇಟಿ, ತುಂಡಾದ ಗೇಟ್ ವೀಕ್ಷಣೆ
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಭ್ರಷ್ಟ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ರೈತರು ಸಂಕಷ್ಟ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ತುಂಗಭದ್ರಾ ಜಲಾಶಯದ ಗೇಟ್‌ಗಳ ಚೈನ್ ತುಂಡಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಮುಂದಿನ ಎರಡು ಬೆಳೆಗಳಿಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿದ್ದು, ಜಲಸಂಪನ್ಮೂಲ ಖಾತೆ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನೈತಿಕ ಹೋಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರು.
ತುಂಗಭದ್ರಾ ಎಡದಂಡೆ ನಾಲೆ ಹಾಗೂ ನಾರಾಯಣಪುರ ಬಲದಂಡೆ ನಾಲೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಭೆ ಕರೆಯುವಂತೆ ಜು.17ರಂದು ಸಂಘದಿಂದ ಪತ್ರ ಬರೆಯಲಾಗಿದ್ದು, ಆದರೆ ಪತ್ರಕ್ಕೆ ಸ್ಪಂಧಿಸದೇ ಡಿ.ಕೆ ಶಿವಕುಮಾರ ಬೇಜವಾಬ್ದಾರಿ ವಹಿಸಿ ಸಭೆ ಕರೆಯದಿರುವ ಕಾರಣಕ್ಕೆ ತುಂಗಭದ್ರಾ ಜಲಾಶಯದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.
ಇದೀಗ 60 ಟಿಎಂಸಿ ನೀರು ಹೊರಹಾಕುವುದು ಅನಿವಾರ್ಯವಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೇ ಉಪಮುಖ್ಯಮಂತ್ರಿ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ. ಕೂಡಲೇ ಅವರ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಜಲಸಂಪನ್ಮೂಲ ಖಾತೆಯ ಸಚಿವ ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಹಾಗೂ ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ನಾಲ್ಕೂ ಜಿಲ್ಲೆಯ ರೈತರು ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಮರಣ್ಣ ಗೋಡಿಹಾಳ, ಪ್ರಭಾಕರ್ ಪಾಟೀಲ್, ಜಾನ್ ವೆಸ್ಲಿ, ಬೂದಯ್ಯಸ್ವಾಮಿ ಸೇರಿದಂತೆ ಇತರರಿದ್ದರು.