ಬೆಂಗಳೂರು: ಶನಿವಾರ ತಡರಾತ್ರಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್ ಗಾಯಗೊಂಡಿದ್ದಾರೆ.
ಬಸವನಗುಡಿಯ ಎನ್.ಆರ್. ಕಾಲನಿ ಬಳಿಕ ಘಟನೆ ಸಂಭವಿಸಿದೆ. ಅವೈಜ್ಞಾನಿಕ ಹಂಪ್ ಕ್ರಾಸ್ ಮಾಡಿದ ಬೆನ್ನಲ್ಲೇ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸುತ್ತಮುತ್ತಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುನೇತ್ರಾ ಅವರು ಬಿದ್ದ ರಭಸಕ್ಕೆ ತಲೆಯಿಂದ ಹೆಲ್ಮೆಟ್ ಕಳಚಿ ಅಷ್ಟು ದೂರು ಹೋಗಿ ಬಿದ್ದಿದೆ.
ಕೆಳಗೆ ಬಿದ್ದಿದ್ದ ಸುನೇತ್ರಾ ಅವರನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಕಾರಿನ ಮೂಲಕ ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಹೆಲ್ಮೆಟ್ ಹಾಕಿದ್ದರಿಂದ ಸುನೇತ್ರಾ ಅವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಅಪಘಾತದ ಬಗ್ಗೆ ಸುನೇತ್ರಾ ಅವರ ಪುತ್ರಿ ಶ್ರೇಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶೂಟಿಂಗ್ ಮುಗಿಸಿ ನಿನ್ನೆ ರಾತ್ರಿ ಬರುವಾಗ ಹಂಪ್ ಕಾಣಿಸದೇ ಸ್ಕೂಟಿ ಜಂಪ್ ಆಗಿದೆ. ನಂತರ ಪಕ್ಕದಲ್ಲೇ ರಸ್ತೆ ಗುಂಡಿ ಇದ್ದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.