ರಾಮನಗರ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಚುನಾವಣೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ ಎಂದಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡು ಕ್ಷೇತ್ರದಲ್ಲಿ ಜೆಡಿಎಸ್ಗೆ ಬಂದ ಮತಗಳನ್ನು ಗಮನಿಸಿದ್ದೇನೆ. ಬಿಜೆಪಿ ಗೆಲ್ಲಿಸಲು ಜೆಡಿಎಸ್ ಅಭ್ಯರ್ಥಿ ಹಾಕಲಾಗಿದೆ ಎಂಬ ಆರೋಪವಿತ್ತು, ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದರು.
ಬೈ ಎಲೆಕ್ಷನ್ಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಸಿಂದಗಿಯಲ್ಲಿ ಇಂತಹ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ನಾನು ಅಲ್ಲಿ ಪ್ರಚಾರ ಮಾಡಿದ್ದೇನೆ. ನನಗೆ ಬೇಸರವಾಗಿದ್ದು ನಿಜ. ನಮಗೆ ಹಿನ್ನಡೆಯಾಗಿರುವುದು ನಿಜ. ಬೈ ಎಲೆಕ್ಷನ್ ಬೇರೆ ಜನರಲ್ ಎಲೆಕ್ಷನ್ ಬೇರೆ. ನನ್ನ ಗಮನ 2023ರ ಸಾರ್ವತ್ರಿಕ ಚುನಾವಣೆ ಮೇಲಿದೆ. ಪಕ್ಷ ಅಧಿಕಾರಿಕ್ಕೆ ತರುವುದು ನನ್ನ ಗುರಿಯಾಗಿದೆ. 2023ರ ಚುನಾವಣೆಗೆ ನಮ್ಮ ಹೋರಟ ನಡೆಯುತ್ತಿದೆ ಎಂದು ತಿಳಿಸಿದರು.
ಹಾನಗಲ್ನಲ್ಲಿ ನಮ್ಮ ಪಕ್ಷಕ್ಕೆ ಬೇಸ್ ಇಲ್ಲ. ಸಿಂದಗಿಯಲ್ಲಿ ಸಂಘಟನೆ ಕೊರತೆ ಇದೆ. ಈ ಚುನಾವಣಾ ಫಲಿತಾಂಶಕ್ಕೆ ಯಾರನ್ನು ದೋಷ ಮಾಡಲ್ಲ. ನವೆಂಬರ್ 8ರಿಂದ ಪಕ್ಷದ ಸಂಘಟನೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಹಣ ದೊಡ್ಡ ಮಟ್ಟದಲ್ಲಿ ನಡೆದಿದೆ. ಹಣ ಹಂಚುವ ಸ್ಥಿತಿ ನಮ್ಮದಲ್ಲ. ಬೈ ಎಲೆಕ್ಷನ್ ನಡೆಯೋದೆ ಹಣ ಬಲದ ಮೇಲೆ. ಅಭ್ಯರ್ಥಿಗಳನ್ನ ಹಾಕುವುದರಲ್ಲಿ ನಾವು ಎಡವಿಲ್ಲ. ನನಗೆ ಈ ಚುನಾವಣೆ ಯಾವುದೇ ನಿರಾಸೆ ತಂದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)