ಜಿಲ್ಲೆ

ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ ಧರಣಿ ಕುಳಿತ ಶಿಕ್ಷಕಿ

ರಾಯಚೂರು: ಪ್ರೀತಿ ಕುರುಡು ಅಂತಾರೆ ನಿಜ. ಆದರೆ, ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾಳೆ.

ಶಿಕ್ಷಕಿಯ ಹೆಸರು ಶಾಂತಾಬಾಯಿ. ಇವರು ಪ್ರತಾಪ್​ ಎಂಬಾತನನ್ನು ಪ್ರೀತಿಸಿ 2017ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದರು. ಆದರೆ, ಪ್ರತಾಪ್ ಶಾಂತಾಬಾಯಿಯ ಜತೆ ಮದ್ವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿಗೆ ಕೈಕೊಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದ್ವೆಯಾಗಿದ್ದಾನೆ.

ಸಂತ್ರಸ್ತೆ ಶಾಂತಾಬಾಯಿಗೆ ಈ ಮೊದಲೇ ಮದ್ವೆಯಾಗಿತ್ತು. ಆದರೆ, ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಎಲ್ಲಾ ವಿಷಯವನ್ನು ತಿಳಿದೇ ಶಾಂತಾಬಾಯಿಯನ್ನ ಪ್ರತಾಪ್​, ಪ್ರೀತಿಸಿ ಮದ್ವೆಯಾಗಿದ್ದ. ಇದೀಗ ಅಂತರ್ಜಾತಿ ವಿವಾಹ ಕಾರಣ ನೀಡಿ, ಶಾಂತಾಬಾಯಿಗೆ ಮೋಸ ಮಾಡಿ ಮತ್ತೊಂದು ಮದ್ವೆಯಾಗಿದ್ದಾನೆ.

ಪ್ರೀತಿಸಿ ಮದ್ವೆಯಾಗಿ ತಂದೆ-ತಾಯಿಯ ಒತ್ತಾಯಕ್ಕೆ ಮಣಿದು ಇದೀಗಪ್ರತಾಪ್​ ಮತ್ತೊಂದು ಮದ್ವೆಯಾಗಿದ್ದಾನೆ. ಬಾಳು ಕೊಡ್ತೀನಿ, ನೀನೇ ಜೀವ ಎಂದು ಇದೀಗ ಶಾಂತಾಬಾಯಿಯನ್ನು ಅರ್ಧದಲ್ಲೇ ಕೈ ಬಿಟ್ಟು ಮೋಸ ಮಾಡಿದ್ದಾನೆ. ಇದೀಗ ಮೋಸ ಮಾಡಿರುವ ಪ್ರತಾಪ್ ಹಾಗೂ ಕುಟುಂಬಸ್ಥರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಅನ್ಯಾಯಕ್ಕೊಳಗಾದ ಶಿಕ್ಷಕಿ ಶಾಂತಾಬಾಯಿಯಿಂದ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)