

ಬೆಂಗಳೂರು: ಜೀ ಕನ್ನಡ ವಾಹಿನಿಯ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ‘ಡ್ರಾಮಾ ಜೂನಿಯರ್ಸ್’ ಇದೀಗ ನಾಲ್ಕನೇ ಸೀಸನ್ ಮೂಲಕ ಕಿರುಪರದೆ ಮೇಲೆ ಬರಲು ಸಿದ್ಧವಾಗಿದೆ. ಇಂದಿನಿಂದ (ಮಾ. 19) ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಲರ್ಫುಲ್ ವೇದಿಕೆ ಮೇಲೆ ಪುಟಾಣಿಗಳು ನಗೆಯ ಹಬ್ಬದೂಟವನ್ನು ಬಡಿಸಲಿದ್ದಾರೆ.
ಲಾಕ್ಡೌನ್ ಬಳಿಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ‘ಡ್ರಾಮಾ ಜೂನಿಯರ್ಸ್’ಗೆ 15 ಸಾವಿರಕ್ಕೂ ಅಧಿಕ ಮಕ್ಕಳಿಗೆ ಆಡಿಷನ್ ಮಾಡಲಾಗಿತ್ತು. ಅದರಲ್ಲಿ ಕೆಲವರು ಆಯ್ಕೆಯಾಗಿದ್ದು, ಅವರ ನಟನಾ ಕೌಶಲವನ್ನು ಕಣ್ತುಂಬಿಕೊಳ್ಳಲು ಇದೀಗ ಸಮಯ ಒದಗಿ ಬಂದಿದೆ. ಹಲವು ವಿಶೇಷತೆಗಳೊಂದಿಗೆ ಈ ಸಲದ ‘ಡ್ರಾಮಾ ಜೂನಿಯರ್ಸ್-4’ ಮೂಡಿಬರುತ್ತಿರುವುದು ಒಂದೆಡೆಯಾದರೆ, ತೀರ್ಪಗಾರರಲ್ಲಿಯೂ ಒಂದಷ್ಟು ಬದಲಾವಣೆಗಳಾಗಿವೆ.
ಹಿಂದಿನ ಮೂರು ಸೀಸನ್ಗಳಲ್ಲಿ ತೀರ್ಪಗಾರರಾಗಿದ್ದ ‘ಜೂಲಿ’ ಲಕ್ಷ್ಮೀ ನಾಲ್ಕನೇ ಸೀಸನ್ನಲ್ಲೂ ಮುಂದುವರಿದರೆ, ಅವರ ಜತೆಗೆ ‘ಕ್ರೇಜಿಸ್ಟಾರ್’ ರವಿಚಂದ್ರನ್ ತೀರ್ಪಗಾರರ ಸ್ಥಾನದಲ್ಲಿ ಸಾಥ್ ನೀಡಲಿದ್ದಾರೆ. ಈಗಾಗಲೇ ಅವರ ಕಿಡ್ನಾಪ್ ಪ್ರೋಮೋಗಳು ವೈರಲ್ ಆಗಿ ಮೆಚ್ಚುಗೆ ಪಡೆದಿವೆ. ಈ ಇಬ್ಬರು ಘಟಾನುಘಟಿಗಳ ಜತೆಗೆ 10 ವರ್ಷಗಳ ಬಳಿಕ ಜೀ ಕನ್ನಡ ವಾಹಿನಿಗೆ ಮರಳುತ್ತಿದ್ದಾರೆ ನಟಿ ರಚಿತಾ ರಾಮ್ ಮಾತಿನ ಮಲ್ಲ ಮಾಸ್ಟರ್ ಆನಂದ್ ಎಂದಿನಂತೆ ನಿರೂಪಕರಾಗಿ ಈ ಸೀಸನ್ನಲ್ಲೂ ಕಾರ್ಯನಿರ್ವಹಿಸಲಿದ್ದಾರೆ.