More

    ಪಠ್ಯದಲ್ಲಿ ಭಗವದ್ಗೀತೆ?: ನಿರ್ಧಾರ ಕೈಗೊಳ್ಳುವ ಮೊದಲು ಚರ್ಚೆ-ಸಚಿವ ನಾಗೇಶ್

    ಬೆಂಗಳೂರು: ಶಾಲಾ-ಕಾಲೇಜು ಪಠ್ಯದಲ್ಲಿ ನೈತಿಕ ವಿಜ್ಞಾನ ವಿಷಯ ಅಳವಡಿಸಲು ನಿರ್ಧರಿಸಲಾಗಿದ್ದು, ಅದರ ಭಾಗವಾಗಿ ಭಗವದ್ಗೀತೆ ಸೇರಿಸಲು ಸಿಎಂ ಜತೆ ರ್ಚಚಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು ಕುರಾನ್ ಮತ್ತು ಬೈಬಲ್​ನಲ್ಲಿ ಇರುವ ಒಳ್ಳೆಯ ಅಂಶಗಳನ್ನೂ ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಇಲ್ಲ ಎಂದು ಅಭಿಪ್ರಾಯಪಟ್ಟರು.

    ಭಗವದ್ಗೀತೆಯನ್ನು ಈ ವರ್ಷವೇ ಸೇರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಭಗವದ್ಗೀತೆ ಅಂಶಗಳನ್ನು ಸೇರಿಸುವ ಬಗ್ಗೆ ಸಾಕಷ್ಟು ಬೇಡಿಕೆಯೂ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಿಕ್ಷಣ ತಜ್ಞರು, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುವುದೆಂದರು.

    ಗುಜರಾತ್​ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಯಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಸೇರಿಸಬೇಕಾಗಿದೆ. ಆದರೆ ಸಾಕಷ್ಟು ಚರ್ಚೆಯ ನಂತರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ದುಡುಕಿ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಗುಜರಾತ್ ಮಾದರಿಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಿದರೆ ತಪ್ಪೇನೂ ಇಲ್ಲ. ಸರ್ಕಾರ ಈ ನಿರ್ಧಾರ ಮಾಡಿದರೆ ಕೆಲವರಿಗೆ ಮುಜುಗರವಾಗಬಹುದು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಬೇಗ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.

    ಗುಜರಾತ್ ಮಾದರಿ ಹೇಗೆ?: ಗುಜರಾತ್​ನ 6ರಿಂದ 12ನೇ ತರಗತಿ ಶಾಲಾ ಪಠ್ಯದಲ್ಲಿ ಭಗವದ್ಗೀತೆಯೂ ಒಂದು ಭಾಗವಾಗಿರಲಿದೆ. ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ‘ಸರ್ವಾಂಗಿ ಶಿಕ್ಷಣ’ ಪಠ್ಯ ಪುಸ್ತಕದ ಮೂಲಕ ಇದನ್ನು ಪರಿಚಯಿಸಲಾಗುತ್ತದೆ. ಒಂಬತ್ತರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಟೋರಿ ಟೆಲ್ಲಿಂಗ್ ಪುಸ್ತಕದ ರೂಪದಲ್ಲಿ ಇದನ್ನು ಪರಿಚಯಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಇರಲಿದೆ. ಆಧುನಿಕ ಮತ್ತು ಪುರಾತನ ಸಂಸ್ಕೃತಿ, ಸಂಪ್ರದಾಯ ಮತ್ತು ತಿಳಿವಳಿಕೆ ವ್ಯವಸ್ಥೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಸರ್ವಾಂಗಿ ಶಿಕ್ಷಣ ಪಠ್ಯದಲ್ಲಿ ಇದು ಪ್ರಾರ್ಥನೆ, ಶ್ಲೋಕ ಹೇಳುವುದು, ನಾಟಕ, ರಸಪ್ರಶ್ನೆ, ಪೇಂಟಿಂಗ್ ಮುಂತಾದವುಗಳೊಂದಿಗೆ ಜೋಡಿಕೊಂಡಿದೆ. ಇದರ ಸ್ಟಡಿ ಮೆಟೀರಿಯಲ್​ಗಳು ಪುಸ್ತಕ ಮತ್ತು ಆಡಿಯೋ-ವಿಡಿಯೋ ಸಿಡಿ ರೂಪದಲ್ಲಿ ಲಭ್ಯವಾಗಲಿದೆ.

    ಶಾಲಾ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್​ಕುಮಾರ್ ಜೀವನ ಚರಿತ್ರೆ ಅಳವಡಿಸುವ ಬಗ್ಗೆ ನಿರ್ಧರಿಸಿಲ್ಲ. ಈ ರೀತಿಯ ಬೇಡಿಕೆಗಳು ಬರುತ್ತಲೇ ಇರುತ್ತವೆ. ಇದನ್ನು ಪಠ್ಯಪುಸ್ತಕ ರಚನಾ ಸಮಿತಿ ಮುಂದಿಡುತ್ತೇವೆ. ಸಮಿತಿಯೇ ತೀರ್ಮಾನ ತೆಗೆದುಕೊಳ್ಳುತ್ತದೆ.

    | ಬಸವರಾಜ ಬೊಮ್ಮಾಯಿ ಸಿಎಂ

    ನಮಗೆ ಬೇಕಿರುವುದು ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮ. ಅಲ್ಲೆಲ್ಲೋ ಗುಜರಾತ್​ನಲ್ಲಿ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಇಡುತ್ತಾರೆಂಬ ವಿಚಾರದಲ್ಲಿ ಇಲ್ಲೂ ಚರ್ಚೆ ಆರಂಭ ಆಗುವಂತೆ ಮಾಡಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಭಗವದ್ಗೀತೆಯನ್ನು ಕುಟುಂಬದಲ್ಲೇ ಹೇಳಿಕೊಡ್ತಾರೆ. ಮಕ್ಕಳ ಬದುಕು ಕಟ್ಟಿಕೊಡಬೇಕಿರುವ ಸರ್ಕಾರ, ಮಕ್ಕಳ ಭವಿಷ್ಯಕ್ಕೆ ಪೂರಕವಾಗುವ ಅಂಶಗಳನ್ನಷ್ಟೇ ಅಳವಡಿಸಬೇಕು.

    | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts