ಶ್ರೀರಂಗಪಟ್ಟಣ ಸಂಗಮ (ಸಂಗ್ರಹ ಚಿತ್ರ) 
ಜಿಲ್ಲೆ

ಕಾವೇರಿ ನದಿಯಲ್ಲಿ ಬಿದ್ದು ಯುವಕ ಕೊಚ್ಚಿ ಹೋದ ಬೆನ್ನಲ್ಲೇ ಎಚ್ಚೆತ್ತ ಶ್ರೀರಂಗಪಟ್ಟಣ ತಾಲೂಕಾಡಳಿತದಿಂದ ಮಹತ್ವದ ಆದೇಶ

ಮಂಡ್ಯ: ಕಾವೇರಿ ನದಿಯಲ್ಲಿ ಬಿದ್ದು ಯುವಕ ಕೊಚ್ಚಿ ಹೋದ ಬೆನ್ನಲ್ಲೇ ಎಚ್ಚೆತ್ತಿರುವ ಶ್ರೀರಂಗಪಟ್ಟಣ ತಾಲೂಕು ಆಡಳಿತ ಕಾವೇರಿ ನದಿ ತೀರಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸುವ ಮೂಲಕ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ರಾಜ್ಯದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿ ತುಳುಕುತ್ತಿದೆ. ಇದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೆಆರ್​ಎಸ್​ ಡ್ಯಾಂ ಕೂಡ ಒಂದು. ನೀರಿನ ಮಟ್ಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಬಿಡಲಾಗಿದೆ. ಕಾವೇರಿ ತೀರ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.

ನಿನ್ನೆ (ಜುಲೈ 13) ಬೆಳಗ್ಗೆ ಕಾಲು ಜಾರಿ ನದಿಯಲ್ಲಿ ಬಿದ್ದು ಬೆಂಗಳೂರಿನ ಯಲಹಂಕ ಮೂಲದ ಅಶೋಕ್ (26) ಕೊಚ್ಚಿ ಹೋಗಿದ್ದಾನೆ. ಅಶೋಕ್​ ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಸಂಗಮಕ್ಕೆ ಬಂದಿದ್ದರು. ಪೂಜೆಗೂ ಮುನ್ನ ನದಿಯಲ್ಲಿ ಕಾಲು ತೊಳೆಯುವ ವೇಳೆ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಎಚ್ಚೆತ್ತಿರುವ ತಾಲೂಕು ಆಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

ನದಿಯಲ್ಲಿ ಅಸ್ತಿ ಬಿಡುವುದಕ್ಕೂ ನಿರ್ಬಂಧ ವಿಧಿಸಿ, ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ ರವೀಂದ್ರ ಆದೇಶ ಹೊರಡಿಸಿದ್ದಾರೆ. ಪ್ರವಾಸಿ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಗಮ ರಸ್ತೆಯನ್ನೇ ಬಂದ್ ಮಾಡಲಾಗಿದ್ದು, ಪ್ರವಾಸಿಗರನ್ನು ಬ್ಯಾರಿಕೇಡ್ ಬಳಿಯೇ ತಡೆದು ವಾಪಾಸ್ ಕಳುಹಿಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)