ಜುಲೈ 16ರಿಂದ ಇಸ್ಮಾರ್ಟ್ ಜೋಡಿ; ಸ್ಟಾರ್ ಸುವರ್ಣಗಾಗಿ ಗಣೇಶ್ ಹೊಸ ರಿಯಾಲಿಟಿ ಶೋ

Ismart
Published on

ಬೆಂಗಳೂರು: ‘ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವ ಕಾರ್ಯಕ್ರಮ ಇದು ...’ ಎಂದು ಖುಷಿಯಿಂದ ಹೇಳಿಕೊಂಡರು ಗಣೇಶ್. ಅವರು ಹೇಳಿದ್ದು ‘ಇಸ್ಮಾರ್ಟ್ ಜೋಡಿ’ ಎಂಬ ಹೊಸ ರಿಯಾಲಿಟಿ ಶೋ ಬಗ್ಗೆ. ಈ ಕಾರ್ಯಕ್ರಮವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜುಲೈ 16ರಂದು ಪ್ರಾರಂಭವಾಗಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

‘ಇಸ್ಮಾರ್ಟ್ ಜೋಡಿ’ ಕಾರ್ಯಕ್ರಮದಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ 10 ಜೋಡಿಗಳು ಭಾಗವಹಿಸುತ್ತಿವೆ. ‘ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುವ ಸುದ್ದಿ ಕೇಳುತ್ತಿರುತ್ತೇವೆ. ಜೀವನ ಎಂದರೆ ಅದಲ್ಲ. ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ. ಹಿರಿಯರ ಜತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು’ ಎನ್ನುತ್ತಾರೆ ಗಣೇಶ್.

ಶೋನಲ್ಲಿ ಗೆದ್ದವರಿಗೆ 10 ಲಕ್ಷ ರೂಪಾಯಿ ಬಹುಮಾನ

26 ಕಂತುಗಳ ಈ ಕಾರ್ಯಕ್ರಮದಲ್ಲಿ ತೀರ್ಪಗಾರರಿರುವುದಿಲ್ಲವಂತೆ. ಇಲ್ಲಿ ಸ್ಪರ್ಧಿಗಳಿಗೆ ಹಲವು ಟಾಸ್ಕ್ ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ. ನಂತರ ಎಲಿಮಿನೇಷನ್ ನಡೆಯುತ್ತದೆ. ಅಂತಿಮವಾಗಿ ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್, ರಿಚರ್ಡ್ ಲೂಯಿಸ್ ಮತ್ತು ಹ್ಯಾರಿಯೆಟ್ ಲೂಯಿಸ್, ಸುಮನ್ ನಗರ್​ಕರ್ ಮತ್ತು ಗುರುದೇವ್ ನಾಗರಾಜ, ದಿಶಾ ಮದನ್ ಮತ್ತು ಶಶಾಂಕ್ ವಾಸುಕಿ ಗೋಪಾಲ್ ಸೇರಿದಂತೆ ಹಿರಿತೆರೆ, ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ 10 ದಂಪತಿಗಳು ಭಾಗವಹಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net