ಬೆಂಗಳೂರು: ಲವ್ ಬ್ರೇಕ್ ಅಪ್ ಆಗಿದ್ದಕ್ಕೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್.ಆರ್.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಸಿದ್ದರಾಮ. ಈತ ಮಂಡ್ಯ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಮೃತ ಸಿದ್ದರಾಮ ತನ್ನ ಅಕ್ಕನ ಮಗಳನ್ನು ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಯ ವಿಚಾರ ಇಡೀ ಕುಟುಂಬಕ್ಕೆ ಗೊತ್ತಿತ್ತು. ಇಬ್ಬರ ಪ್ರೀತಿಗೆ ಮನೆಯವರ ವಿರೋಧವೂ ಇರಲಿಲ್ಲ. ಪ್ರೇಯಸಿ ಜತೆಗೆ ಖುಷಿ ಖುಷಿಯುಂದಲೇ ಬರ್ತಡೇ ಕೂಡ ಆಚರಿಸಿಕೊಂಡಿದ್ದ.
ಇಬ್ಬರ ನಡುವೆ ಎಲ್ಲವೂ ಸರಿಯಿತ್ತು. ಆದರೆ, ಮೂರು ತಿಂಗಳಿಂದ ಯಾವುದೋ ಕಾರಣದಿಂದ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿದ್ದರಾಮ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ಮನೆಯಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಸಿದ್ದರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಆರ್ಆರ್ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಯುವಕನ ಮೃತದೇಹ ರವಾನಿಸಿ, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)