ಜಿಲ್ಲೆ

ಕೋಲಾರದಲ್ಲಿ ಆರತಕ್ಷತೆ ವೇಳೆ ಕುಸಿದುಬಿದ್ದು ವಧುವಿನ ಬ್ರೈನ್​ ಡೆಡ್: ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪಾಲಕರು

ಕೋಲಾರ: ಮದುವೆ ಆರತಕ್ಷತೆ ವೇಳೆ ಕುಸಿದು ಬಿದ್ದು ಅಸ್ವಸ್ಥಳಾಗಿದ್ದ ಮದುಮಗಳು ಸಾವಿನ ಹೊಸ್ತಿಲಲ್ಲಿರುವ ಆತಂಕಕಾರಿ ಘಟನೆ ನಡೆದಿದ್ದು, ಆರೋಗ್ಯ ಸಚಿವ ಕೆ. ಸುಧಾಕರ್​ ಮಾಹಿತಿ ಖಚಿತ ಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ (26) ಮದುವೆ ಆರತಕ್ಷತೆಯ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಆಕೆಯನ್ನು ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು, ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್​, 26 ವರ್ಷದ ಚೈತ್ರಾಗೆ ಇದು ದುರಂತದ ದಿನ. ಚೈತ್ರಾ ಬಾಳಲ್ಲಿ ವಿಧಿ ಬೇರೆ ಪ್ಲಾನ್​ ಮಾಡಿರುವಂತೆ ಗೋಚರಿಸುತ್ತಿದೆ. ಮದುವೆ ಆರತಕ್ಷತೆ ವೇಳೆ ಕುಸಿದುಬಿದ್ದ ಚೈತ್ರಾರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ನಿಮ್ಹಾನ್ಸ್​ ವೈದ್ಯರು ತಿಳಿಸಿದ್ದು, ಇಂತಹ ದುರಂತದ ಸಮಯದಲ್ಲೂ ಆಕೆಯ ಅಂಗಾಂಗ ದಾನಕ್ಕೆ ಪಾಲಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)