ಜಿಲ್ಲೆ

ಶಿಷ್ಟಾಚಾರ ಪಾಲಿಸುತ್ತೇನೆ ಎಂದ ರೋಹಿಣಿ ಸಿಂಧೂರಿ

ಮೈಸೂರು: ಇನ್ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುತ್ತೇನೆ ಎಂದು ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

2021ರ ಜನವರಿ 12ರಂದು ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಕಾಗದ ಪತ್ರ ಸಮಿತಿ ಸಭೆ ನಡೆದಿತ್ತು, ಈ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅವರು ಅಗೌರವವಾಗಿ ನಡೆದುಕೊಂಡಿದ್ದಕ್ಕೆ ಅವರ ವಿರುದ್ಧ ವಿಧಾನಸಭೆ ಕಲಾಪದಲ್ಲಿ ಸಾರಾ ಮಹೇಶ್​ ಹಕ್ಕುಚ್ಯುತಿ ಮಂಡಿಸಿದ್ದರು. ಇದೀಗ ಹಕ್ಕುಭಾದ್ಯತೆಗಳ ಸಮಿತಿ ಮುಂದೆ ಮಾತನಾಡಿರುವ ರೋಹಿಣಿ ಸಿಂಧೂರಿ, ಇನ್ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುತ್ತೇನೆ ಎಂದಿದ್ದಾರೆ.

ಸಮಿತಿಯ ವರದಿ ದಿಗ್ವಿಜಯ ನ್ಯೂಸ್‌ಗೆ ಲಭ್ಯವಾಗಿದೆ. ಕಾಗದ ಪತ್ರ ಸಮಿತಿ ನಡೆಸಿದ್ದ ಮುಡಾ ಸಭೆ, ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೂ ಸಿಂಧೂರಿ ಗೈರಾಗಿದ್ದರು. ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿರುವ ಸಾ.ರಾ‌.ಮಹೇಶ್ ಈ ಬಗ್ಗೆಯೂ ಹಕ್ಕುಚ್ಯುತಿ ಮಂಡಿಸಿದ್ದರು. (ದಿಗ್ವಿಜಯ ನ್ಯೂಸ್​)