ಜಿಲ್ಲೆ

ಅಪ್ಪಂದಿರ ದಿನವೇ ತಂದೆ ಜತೆ ನೇಣಿಗೆ ಶರಣಾದ ಸ್ಪೂರ್ತಿ-ಕೀರ್ತಿ: ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ

ಬೆಳಗಾವಿ: ಇಬ್ಬರು ಪುತ್ರಿಯರಿಗೆ ಸ್ಪೂರ್ತಿ-ಕೀರ್ತಿ ಎಂಬ ಹೆಸರಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ಸಂಭವಿಸಿದೆ.

ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ ನೋವಿನಿಂದ ಹೊರಬರಲಾಗದ ಪತಿ ಜತೆಗೆ ದಂಪತಿಯ ಇಬ್ಬರೂ ಪುತ್ರಿಯರು ತಂದೆ ಜತೆಗೆ‌ ಭಾನುವಾರ ಬೆಳಗಿನ ಜಾವ ನೇಣಿಗೆ ಕೊರಳೊಡ್ಡಿರುವ ಘಟನೆ ಇಡೀ ಗ್ರಾಮಕ್ಕೆ ದಿಗ್ಬ್ರಮೆ ಮೂಡಿಸಿದೆ.

ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ನಿವಾಸಿ ಕಾಡಪ್ಪಾ ರಂಗಾಪುರೆ(48), ಕೀರ್ತಿ(20) ಮತ್ತು ಸ್ಪೂರ್ತಿ(18) ಆತ್ಮಹತ್ಯೆಗೆ ಶರಣಾದ ತಂದೆ-ಮಕ್ಕಳು. ಘಟನಾ ಸ್ಥಳಕ್ಕೆ ಪಿಎಸ್‌ಐ ರಾಕೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಜೂ.11ರಂದು ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ನಿಧನರಾಗಿದ್ದು. ಕಳೆದ ಹಲವು ವರ್ಷಗಳಿಂದ ಚನ್ನವ್ವ ಕಾಡಪ್ಪ ರಂಗಾಪುರೆ ಕುಟುಂಬ ತೋಟದ ಮನೆಯಲ್ಲಿಯೇ ವಾಸವಾಗಿದ್ದರು. ಮೊದಲಿನಿಂದಲೂ ಕಾಡಪ್ಪ ತಾನಾಯ್ತು ತನ್ನ ದುಡಿಮೆ ಆಯ್ತು ಎಂದಷ್ಟೇ ಜೀವನ ಸಾಗಿಸುತ್ತಿದ್ದ ಎನ್ನಲಾಗಿದ್ದು, ದಂಪತಿ ಇಬ್ಬರೂ ಪುತ್ರಿಯರನ್ನು ಪಿಯುಸಿ ವರೆಗೂ ಓದಿಸಿದ್ದರು.

ಚನ್ನವ್ವ ಅವರಿಗೆ ಇದಕ್ಕೂ ಮುನ್ನ ಮೂರು ಬಾರಿ ಹೃದಯಾಘಾತ ಉಂಟಾಗಿತ್ತು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರಿಂದ ಗುಣಮುಖರಾಗಿದ್ದರು. ಆದರೆ, ಜೂ.11ರಂದು ಶುಕ್ರವಾರ ಮತ್ತೇ ಹೃದಯಾಘತ ಸಂಭವಿಸಿ, ಆಸ್ಪತ್ರೆಗೆ ಕರೆದೋಯ್ದರೂ ಫಲಕಾರಿಯಾಗದೇ ಮೃತಪಟ್ಟಿದ್ದರು. ಘಟನೆಯಿಂದ ಪತಿ ಹಾಗೂ ಇಬ್ಬರೂ ಪುತ್ರಿಯರು ತೀವ್ರ ಮನನೊಂದಿದ್ದರು ಹೀಗಾಗಿಯೇ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕೋಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.