ಬೆಂಗಳೂರು: ದೆಹಲಿಯಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಆರ್. ಆಶೋಕ, ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನು ಮರೆತಿಲ್ಲ ಎಂದು ಗುಡುಗಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿದ ಅವರು, "ಸಿಎಂ ಸಿದ್ದರಾಮಯ್ಯ ಅವರೇ, ತಾವು ಮೊದಲ ಮುಖ್ಯಮಂತ್ರಿಯಾಗಿದ್ದಾಗ ಕಳಸಾ- ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ತಮ್ಮ ಸರ್ಕಾರ ರೈತರನ್ನು, ರೈತರ ಮೇಲೆ ಲಾಠಿ ಬೀಸಿದ್ದನ್ನು ರಾಜ್ಯದ ಜನ ಮರೆತಿಲ್ಲ" ಎಂದರು.
"ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನು ಸಹ ಮರೆತಿಲ್ಲ. ಇತ್ತೀಚೆಗೆ ತಮ್ಮ ಮಂತ್ರಿಗಳು, ಪರಿಹಾರಕ್ಕೋಸ್ಕರ, ಸಾಲ ಮನ್ನಾ ಆಗುತ್ತದೆ ಎನ್ನುವ ಆಸೆಯಿಂದ ಬರಲಿ ಎಂದು ಆಶಿಸುತ್ತಾರೆ ಎಂದು ಅನ್ನದಾತರನ್ನು ಅವಮಾನಿಸಿದ್ದನ್ನೂ ಕೂಡ ಜನ ಮರೆತಿಲ್ಲ" ಎಂದರು.
ತಮ್ಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು "ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನುವುದಿಲ್ಲವೇ?" ಎಂದು ನಿಂದಿಸಿದ್ದನ್ನೂ ಜನ ಮರೆತಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿರುವಾಗ ತಮ್ಮ ನಾಟಕವನ್ನು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕರ್ನಾಟಕದ ರೈತರು ನಂಬುತ್ತಾರೆಯೇ? ನಿಮ್ಮ ನಾಟಕ ಸಾಕು, ಮೊದಲು ರೈತರಿಗೆ ಬರ ಪರಿಹಾರ ಕೊಡುವತ್ತ ಗಮನ ಹರಿಸಿ ಎಂದು ಹೇಳಿದ್ದಾರೆ.