ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆಯ ಮ್ಯಾರಥಾನ್ ಓಟಗಾರ ಕೆಲ್ವಿನ್ ಸಾವು

New-Project-1-1-1
Published on

ನೈರೊಬಿ (ಕೀನ್ಯಾ): ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆ ಹೊಂದಿದ್ದ ಕೀನ್ಯಾದ ಕೆಲ್ವಿನ್ ಕಿಪ್ಟಮ್ ಹಾಗೂ ಅವರ ಕೋಚ್ ರುವಾಂಡದ ಗೆರ್ವೈಸ್ ಹಕಿಜಿಮಾನಾ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. 2023ರ ಚಿಕಾಗೋ ಮ್ಯಾರಾಥಾನ್‌ನಲ್ಲಿ ವಿಶ್ವ ದಾಖಲೆ ರಚಿಸಿದ 24 ವರ್ಷದ ಕೆಲ್ವಿನ್, ತನ್ನ ಕೋಚ್ ಹಾಗೂ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಪಶ್ಚಿಮ ಕೀನ್ಯಾದ ಕಪ್ಸಬೆಟ್ ಪಟ್ಟಣದ ಬಳಿ ರಾತ್ರಿ 11 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.

ಕೆಲ್ವಿನ್ ಕಿಪ್ಟಮ್ ಚಾಲನೆ ಮಾಡುತ್ತಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ, ಬಳಿಕ ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿದೆ. ಅಪಘಾತದ ಸ್ಥಳದಲ್ಲಿಯೆ ಕೆಲ್ವಿನ್ ಹಾಗೂ ಅವರ ತರಬೇತುದಾರ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ 24 ವರ್ಷದ ಮಹಿಳೆ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕಿಪ್ಟಮ್ ಅವರು ಅಕ್ಟೋಬರ್‌ನಲ್ಲಿ ನಡೆದ ಚಿಕಾಗೋ ಮ್ಯಾರಥಾನ್‌ನಲ್ಲಿ 2 ಗಂಟೆ, 35 ಸೆಕೆಂಡ್‌ನಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ವಿಶ್ವ ದಾಖಲೆ ರಚಿಸಿದ್ದರು. ಇದರೊಂದಿಗೆ ಕೀನ್ಯಾದ ಎಲಿಯುಡ್ ಕಿಪ್ರೋಜ್ ಅವರ ಸಾಧನೆಯನ್ನು ಹಿಮ್ಮೆಟ್ಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net