ಸುಳ್ಯ: ಸರ್ಕಾರದ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಿ, ಕೆಲಸ ಪ್ರಾರಂಭಿಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ಗಳು ವರದಿ ನೀಡಬೇಕೆಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ ಸೂಚನೆ ನೀಡಿದ್ದಾರೆ.
ಗುರುವಾರ ಸುಳ್ಯ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ, ಜನವರಿ ಮುಗಿದರೂ ಯಾಕೆ ಅನುದಾನ ಖರ್ಚು ಮಾಡಿಲ್ಲ? ಕಾಮಗಾರಿ ಮಾಡದೆ, ಅನುದಾನ ಖರ್ಚು ಮಾಡದೆ ಏನು ಮಾಡುತ್ತಾ ಇದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದರು. ಕಳೆದ ವರ್ಷ ಏಪ್ರಿಲ್, ಜೂನ್ ತಿಂಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ ಕೆಲವು ಇಲಾಖೆಗಳು ಇನ್ನೂ ಟೆಂಡರ್ ಮಾಡದೆ ಪ್ರಗತಿ ಸಾಧಿಸದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.
94ಸಿ, ಅಕ್ರಮ ಸಕ್ರಮ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ. ಜನರ ಸೇವೆಗಳನ್ನು ಮಾಡಲು ಹಿಂದೇಟು ಹಾಕಬಾರದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. 94ಸಿ, ಅಕ್ರಮ ಸಕ್ರಮ ಕಡತಗಳನ್ನು ಯಾವುದೇ ಕಾರಣಕ್ಕೂ ಪೆಂಡಿಂಗ್ ಇರಬಾರದು.ಅವುಗಳನ್ನು ವಿಲೇವಾರಿ ಮಾಡಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸಬಾರದು ಎಂದು ಆಡಳಿತಾಧಿಕಾರಿಸೂಚಿಸಿದರಲ್ಲದೆ ಸಭೆಗೆ ಹಾಜರಾಗದ ಇಲಾಖಾ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಕಳಿಸುವಂತೆ ಅವರು ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಎಂ.ಇದ್ದರು.
ಕ್ರಮದ ಎಚ್ಚರಿಕೆ
ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಯಲಕ್ಷ್ಮೀ ರಾಯಕೋಡ ಫೆಬ್ರವರಿ ಎರಡನೇ ವಾರದೊಳಗೆ ಶೇ.80ರಷ್ಟು ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕು. ಮುಂದಿನ ಸಭೆಯ ವೇಳೆಗೆ ಸರಿಯಾದ ಪ್ರಗತಿ ಸಾಧಿಸದಿದ್ದರೆ ಅಂತಹಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಶಿಥಿಲಗೊಂಡ ಕಟ್ಟಡಗಳ ಬಗ್ಗೆ ನಿಗಾ ವಹಿಸಿ
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡಗಳನ್ನು ಪರಿಶೀಲನೆ ಮಾಡಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಈ ಕಟ್ಟಡಗಳ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.