ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ ನಡೆಸಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯೊಬ್ಬನಿಗೆ 12 ವರ್ಷ ಜೈಲು ಹಾಗೂ 85 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಮಂಗಳೂರು ಸೆಷನ್ಸ್ ನ್ಯಾಯಾಲಯ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ನಿವಾಸಿ ಬಾಲಕೃಷ್ಣ ಶಿಕ್ಷೆಗೊಳಗಾಗಿರುವ ಅಪರಾಧಿ. ಈತ ಶಾಲೆಗೆ ಹೋಗಿದ್ದ ಅಪ್ರಾಪ್ತ ವಯಸ್ಸಿನವಳನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಬಳಿಕ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು.
2019ರ ಜು.25ರಂದು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದ್ದ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಅಪರಾಧಿ ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಜೈಲು ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕಾಗುತ್ತದೆ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.