ಬೆಂಗಳೂರು: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಮನಸ್ಸೊಂದಿದ್ದರೆ ಮಾರ್ಗವು ಮಾರ್ಗ ಉಂಟು ಕೆಚ್ಚೆದೆ ಇರಬೇಕೆಂದು, ಕೆಚ್ಚೆದೆ ಇರಬೇಕೆಂದೆಂದು...ಈ ಸಾಲುಗಳಿಂದ ಸ್ಫೂರ್ತಿಯಾಗಿ ಪಡೆದ ಪಿಎಸ್‌ಐ ಶಾಂತಪ್ಪ ಜಡಮ್ಮನರ್ ತಮ್ಮ ಸ್ವಂತ ಖರ್ಚಿನಲ್ಲೇ ಮೊಬೈಲ್ ಟಾಯ್ಲೆಟ್ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದಾರೆ.
ಗೊರಗುಂಟೆಪಾಳ್ಯದಲ್ಲಿ ಪಬ್ಲಿಕ್ ಟಾಯ್ಲೆಟ್‌ಗಾಗಿ ಪಿಎಸ್‌ಐ ಟ್ವಿಟರ್ ಅಭಿಯಾನವನ್ನು ಕೈಗೊಂಡಿದ್ದರು. ಈ ಬಗ್ಗೆ ವಿಜಯವಾಣಿ ಏ.19ರಂದು ಪಬ್ಲಿಕ್ ಟಾಯ್ಲೆಟ್‌ಗಾಗಿ ಎಸ್‌ಐ ಹೋರಾಟ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯೊಂದನ್ನು ಪ್ರಕಟಿಸಿ ಶಾಂತಪ್ಪನವರ ಸಮಾಜಮುಖಿ ಕಾರ್ಯಕ್ಕೆ ಬೆಂಬಲವಾಗಿ ನಿಂತಿತ್ತು.
ತಮ್ಮ ಅಭಿಯಾನಕ್ಕೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಲ್ಲದೆ ಅಭಿಯಾನ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮೊಬೈಲ್ ಟಾಯ್ಲೆಟ್ ಸಾಂಕೇತಿಕವಾಗಿ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದಾರೆ.
ಸದಾ ಜನಜಂಗುಳಿಯಿಂದ ಕೂಡಿದ ಪ್ರದೇಶವಾದ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಯಾರೊಬ್ಬರೂ ಸ್ಪಂದಿಸದಿದ್ದರಿಂದ ಪಿಎಸ್‌ಐ ಶಾಂತಪ್ಪ ತಮ್ಮ ಸ್ವಂತ ಖರ್ಚಿನಲ್ಲೇ ಮೊಬೈಲ್ ಟಾಯ್ಲೆಟ್ ಇರಿಸಿ ಬುಧವಾರ ಅದನ್ನು ತೃತೀಯ ಲಿಂಗಿ ಭವಾನಿ ಅವರಿಂದ ಉದ್ಘಾಟನೆ ಮಾಡಿಸಿದ್ದಾರೆ.
ಇಂದು ಉದ್ಘಾಟನೆ ಗೊಂಡಿರುವ ಮೊಬೈಲ್ ಶೌಚಗೃಹ ಸಾಂಕೇತಿಕವಾಗಿದೆ. ಈ ಭಾಗದಲ್ಲಿ ಶಾಶ್ವತ ಶೌಚಗೃಹ ಬರುವವರೆಗೂ ನನ್ನ ಟ್ವಿಟರ್ ಅಭಿಯಾನ ಮುಂದುವರಿಯಲಿದೆ. | ಶಾಂತಪ್ಪ ಜಡಮ್ಮನರ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್
10 ಶೌಚಾಲಯ: ವಾಹನದಲ್ಲಿ ಒಟ್ಟು 10 ಶೌಚಾಲಯ ಇವೆ. 5 ಪುರುಷರದು, 3 ಮಹಿಳೆಯರದು, 2 ತೃತೀಯ ಲಿಂಗಿಗಳದ್ದು. ಇದಕ್ಕೆ ಬೇಕಾದ ನೀರಿನ ವ್ಯವಸ್ಥೆ ವಾಹನದಲ್ಲಿದೆ. ಎಲ್ಲವೂ ತುಂಬಿದ ನಂತರ, ವಿಲೇವಾರಿ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ. ಜತೆಗೆ ಇದನ್ನು ನಿರ್ವಹಣೆ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದ್ದಾರೆ.